
ಶಿವಮೊಗ್ಗ: ವಾಯುಪಡೆಯ ತರಬೇತಿ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೆ ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ವಾಯುಪಡೆಯ ವಾರಂಟ್ ಅಧಿಕಾರಿ ಮಂಜುನಾಥ್ ಜಿ.ಎಸ್ (36) ಅವರು ಉತ್ತರ ಪ್ರದೇಶದ ಆಗ್ರಾದಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ.
ಆಗ್ರಾದ ಮಾಲ್ಪುರ ಪ್ಯಾರಾಚೂಟ್ ಡ್ರಾಪ್ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು, ಇದರಲ್ಲಿ 12 ಅಧಿಕಾರಿಗಳು ಪಾಲ್ಗೊಂಡಿದ್ದರು. 11 ಮಂದಿ ಸುರಕ್ಷಿತವಾಗಿ ಭೂಮಿಯ ಮೇಲೆ ಇಳಿದರೆ, ಮಂಜುನಾಥ್ ಪ್ಯಾರಾಚೂಟ್ ವಿಫಲಗೊಂಡು ನಾಪತ್ತೆಯಾಗಿದ್ದರು. ಶೋಧ ಕಾರ್ಯಾಚರಣೆಯ ನಂತರ, ಸಮೀಪದ ಜಮೀನಿನಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾದರೂ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಮೂಲತಃ ಹೊಸನಗರ ತಾಲೂಕಿನ ಸಂಕೂರು ಗ್ರಾಮದವರಾದ ಮಂಜುನಾಥ್, ಕೃಷಿಕ ಕುಟುಂಬದಿಂದ ಬಂದವರು. ಅವರು ಅಸ್ಸಾಂನ ತಾಂತ್ರಿಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ ಹಾಗೂ ಒಂದು ಮಗುವನ್ನು ಅವರು ಅಗಲಿದ್ದಾರೆ. ಈ ಘಟನೆ ಅವರ ಕುಟುಂಬಕ್ಕೆ ಭಾರೀ ದುಃಖ ತಂದಿದ್ದು, ಶನಿವಾರ ರಾತ್ರಿ ಪಾರ್ಥೀವ ಶರೀರ ಬೆಂಗಳೂರಿಗೆ ತಲುಪುವ ನಿರೀಕ್ಷೆ ಇದೆ.