
ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಗೂಗಲ್‌ನ ಜೆಮಿನಿ ನ್ಯಾನೋ ಬನಾನಾ AI ಎಂಬ ಫೋಟೋ ಎಡಿಟಿಂಗ್ ಟೂಲ್, ಆತಂಕ ಮತ್ತು ಅಚ್ಚರಿ ಎರಡನ್ನೂ ಸೃಷ್ಟಿಸಿದೆ. ಈ ಟೂಲ್ ಅನ್ನು ಬಳಸುವಾಗ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡುವ ಘಟನೆಯೊಂದು ನಡೆದಿದೆ.
ಇನ್‌ಸ್ಟಾಗ್ರಾಂ ಬಳಕೆದಾರರಾದ ಝಲಕ್ ಭಾವನಾನಿ ಅವರು ಈ AI ಟೂಲ್‌ನ ಸಾಮರ್ಥ್ಯವನ್ನು ಪರೀಕ್ಷಿಸಲು ತಮ್ಮ ಸಂಪೂರ್ಣ ದೇಹವನ್ನು ಮುಚ್ಚಿದ್ದ ಹಸಿರು ಬಣ್ಣದ ಉಡುಪಿನಲ್ಲಿರುವ ಫೋಟೋವನ್ನು ಅಪ್‌ಲೋಡ್ ಮಾಡಿದರು. ಅವರು ಬಯಸಿದಂತೆ, AI ಟೂಲ್ ಆ ಫೋಟೋವನ್ನು ಅದ್ಭುತವಾದ ಕಪ್ಪು ಬಣ್ಣದ ಸೀರೆಯ ರೆಟ್ರೊ ಲುಕ್‌ಗೆ ಪರಿವರ್ತಿಸಿತು. ಈ ಫಲಿತಾಂಶ ನೋಡಿ ಅವರು ಆಶ್ಚರ್ಯಚಕಿತರಾದರು.
ಆದರೆ, ಇಲ್ಲಿ ನಡೆದ ದೊಡ್ಡ ಅಚ್ಚರಿಯ ವಿಷಯವೆಂದರೆ, ಮೂಲ ಫೋಟೋದಲ್ಲಿ ಯುವತಿಯ ಬಟ್ಟೆಯಿಂದ ಮುಚ್ಚಿದ್ದ ಎಡಗೈ ಮೇಲೆ ಚಿಕ್ಕದಾದ ಕಪ್ಪು ಮಚ್ಚೆ ಇತ್ತು. AI ಟೂಲ್ ನೀಡಿದ ಹೊಸ ಫೋಟೋದಲ್ಲಿ, ಮಚ್ಚೆ ಸ್ಪಷ್ಟವಾಗಿ ಗೋಚರಿಸಿದೆ. ಇದು, AI ತಂತ್ರಜ್ಞಾನವು ಮಾನವನ ದೇಹವನ್ನು ಯಾವ ಮಟ್ಟಕ್ಕೆ ಅರ್ಥಮಾಡಿಕೊಂಡಿದೆ ಮತ್ತು ಅದರ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ತೋರಿಸಿದೆ.
ಈ ಘಟನೆಯ ಕುರಿತು ವಿಡಿಯೋವೊಂದನ್ನು ಪೋಸ್ಟ್ ಮಾಡಿದ ಝಲಕ್ ಭಾವನಾನಿ, ‘ತಂತ್ರಜ್ಞಾನದ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು’ ಎಂದು ಎಚ್ಚರಿಸಿದ್ದಾರೆ. ಬಟ್ಟೆಯಿಂದ ಮುಚ್ಚಿದ ದೇಹದ ಭಾಗದಲ್ಲಿದ್ದ ಚಿಕ್ಕ ಮಚ್ಚೆಯನ್ನು AI ಹೇಗೆ ಗುರುತಿಸಿದೆ ಎಂಬುದು ಅವರಿಗೆ ದೊಡ್ಡ ಪ್ರಶ್ನೆಯಾಗಿದೆ. ಈ ಘಟನೆಯು AI ತಂತ್ರಜ್ಞಾನದ ತೀವ್ರವಾದ ಸಾಮರ್ಥ್ಯವನ್ನು ಎತ್ತಿ ತೋರಿಸಿದ್ದು, ವೈಯಕ್ತಿಕ ಮಾಹಿತಿಯ ಗೌಪ್ಯತೆಯ ಬಗ್ಗೆ ಜಾಗೃತರಾಗಿರಲು ಕರೆ ನೀಡಿದೆ.



































