
ದೆಹಲಿ: ಕಾಬೂಲ್‌ನಿಂದ ದೆಹಲಿಗೆ ಹೊರಟಿದ್ದ ಕಾಮ್ ಏರ್ ವಿಮಾನದ ಲ್ಯಾಂಡಿಂಗ್ ಗೇರ್ ವಿಭಾಗದಲ್ಲಿ ಅಡಗಿಕೊಂಡು, 13 ವರ್ಷದ ಆಫ್ಘಾನ್ ಬಾಲಕನೊಬ್ಬ ಅಪಾಯಕಾರಿ ಪ್ರಯಾಣ ಬೆಳೆಸಿರುವುದು ಆಶ್ಚರ್ಯ ಮೂಡಿಸಿದೆ. ಉತ್ತರ ಅಫ್ಘಾನಿಸ್ತಾನದ ಕುಂದುಜ್ ನಗರದ ಈ ಹದಿಹರೆಯದ ಬಾಲಕ ಸೋಮವಾರ ವಿಮಾನ ಇಳಿದ ನಂತರ ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಅಲೆದಾಡುತ್ತಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವಿವರಗಳು:
ಭಾರತೀಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ವಕ್ತಾರರ ಪ್ರಕಾರ, ಕಾಮ್ ಏರ್‌ಲೈನ್ಸ್‌ನ ವಿಮಾನ RQ-4401 ಭಾನುವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿತ್ತು. ಆಗ ಪೊಲೀಸ್ ಸಿಬ್ಬಂದಿ ಬಾಲಕ ಒಂಟಿಯಾಗಿ ಸುತ್ತಾಡುತ್ತಿರುವುದನ್ನು ಗಮನಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಾಲಕ ತಾನು ವಿಮಾನದ ಹಿಂಭಾಗದ ಕೇಂದ್ರ ಲ್ಯಾಂಡಿಂಗ್ ಗೇರ್ ವಿಭಾಗದಲ್ಲಿ ಅಡಗಿಕೊಂಡಿದ್ದಾಗಿ ತಿಳಿಸಿದ್ದಾನೆ.
- ತಾನು ಇರಾನ್‌ಗೆ ಪ್ರಯಾಣಿಸಬೇಕೆಂದು ಬಯಸಿದ್ದೆ. ಆದರೆ, ಈ ವಿಮಾನ ದೆಹಲಿಗೆ ಹೊರಟಿದೆ ಎಂದು ತಿಳಿದಿರಲಿಲ್ಲ ಎಂದು ಬಾಲಕ ಅಧಿಕಾರಿಗಳಿಗೆ ಹೇಳಿದ್ದಾನೆ.
- ಬಾಲಕ ತನ್ನೊಂದಿಗೆ ಸಣ್ಣ ಕೆಂಪು ಬಣ್ಣದ ಆಡಿಯೋ ಸ್ಪೀಕರ್ ಮಾತ್ರ ಇಟ್ಟುಕೊಂಡಿದ್ದ. ಭದ್ರತಾ ತಪಾಸಣೆ ನಡೆಸಿದಾಗ ಈ ಸ್ಪೀಕರ್ ಕೂಡ ಪತ್ತೆಯಾಗಿದೆ.
- ಬಾಲಕ ಕಾಬೂಲ್ ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ತಪ್ಪಿಸಿ, ಪ್ರಯಾಣಿಕರ ಗುಂಪಿನೊಂದಿಗೆ ವಿಮಾನದ ಹಿಂಬದಿಗೆ ಬಂದು ಚಕ್ರವಿರುವ ವಿಭಾಗದಲ್ಲಿ ಅಡಗಿಕೊಂಡಿದ್ದ ಎಂದು ವರದಿಯಾಗಿದೆ.
ಹಲವು ಗಂಟೆಗಳ ವಿಚಾರಣೆಯ ನಂತರ ಬಾಲಕನನ್ನು ಅದೇ ವಿಮಾನದಲ್ಲಿ ಕಾಬೂಲ್‌ಗೆ ವಾಪಸ್ ಕಳುಹಿಸಲಾಗಿದೆ.



































