
ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾರೆ ಎನ್ನಲಾದ ಪ್ರಕರಣದ ತನಿಖೆಗಾಗಿ SIT ನಡೆಸುತ್ತಿರುವ ಶೋಧಕಾರ್ಯಕ್ಕೆ ಗ್ರೌಂಡ್ ಪೆನಿಟ್ರೇಟಿಂಗ್ ರಾಡಾರ್ (GPR) ಮತ್ತು ಇತರ ಆಧುನಿಕ ತಂತ್ರಜ್ಞಾನಗಳನ್ನು ಬಳಸುವಂತೆ ನಟ ಮತ್ತು ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತನಿಖೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಚೇತನ್, “ಸತ್ಯವು ಸ್ವಚ್ಛತಾ ಕಾರ್ಮಿಕನ ಕಡೆ ಇದ್ದಂತಿದೆ. ತನಿಖೆಯು ಸಂಪೂರ್ಣವಾಗಿರಲು ನಾವು ಜಿಪಿಆರ್ ಮತ್ತು ಇತರ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಬೇಕೆಂದು ಮನವಿ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ಅಸ್ಥಿಪಂಜರಗಳ ಶೋಧ ಕಾರ್ಯದ ವೇಳೆ 11ನೇ ಪಾಯಿಂಟ್‌ನಲ್ಲಿ 6 ಅಡಿ ಅಗೆದಾಗ, ಅಸ್ಥಿಪಂಜರದ ಭಾಗಗಳು ಮತ್ತು ಸೀರೆಯೊಂದು ಪತ್ತೆಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಇದು ಸ್ಥಳದಲ್ಲಿ ಮೂಳೆಗಳು ಇರುವುದನ್ನು ಸಾಬೀತುಪಡಿಸುತ್ತದೆ ಎಂದು ಚೇತನ್ ಹೇಳಿದ್ದಾರೆ.
ಹೊಸ ಸಾಕ್ಷಿಯ ಪತ್ತೆ, ರಕ್ಷಣೆಗೆ ಮನವಿ
ಇದೇ ವೇಳೆ, ಮತ್ತೊಬ್ಬ ವ್ಯಕ್ತಿ ಜಯಂತ್ ಟಿ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿ, “ನಾನು ಅಪ್ರಾಪ್ತೆಯನ್ನು ಹೂತಿರುವುದನ್ನು ನೇರವಾಗಿ ನೋಡಿದ್ದೇನೆ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಇತರ ಸಾಕ್ಷಿಗಳು ಇದ್ದಾರೆ” ಎಂದು ಹೇಳಿದ್ದಾರೆ. ಇದು ಪ್ರಕರಣದ ವಿಚಾರಣೆಗೆ ಒಂದು ದೊಡ್ಡ ತಿರುವು ನೀಡಿದ್ದು, ಹೊಸ ಸಾಕ್ಷಿ ಸಿಕ್ಕಿರುವುದು ಪ್ರಕರಣವನ್ನು ಬಲಪಡಿಸಿದೆ ಎಂದು ಚೇತನ್ ಅಭಿಪ್ರಾಯಪಟ್ಟಿದ್ದಾರೆ. ಅಂತಹ ಸಾಕ್ಷಿಗಳಿಗೆ ಯಾವುದೇ ಬೆದರಿಕೆ ಅಥವಾ ಒತ್ತಡಗಳಿಂದ ದೂರವಿರಲು ಅವರ ರಕ್ಷಣೆಯನ್ನು ಖಡ್ಡಾಯಗೊಳಿಸಬೇಕೆಂದು ಚೇತನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.