
ಇತ್ತೀಚಿನ ದಿನಗಳಲ್ಲಿ ಪ್ಯಾಕ್ಟ್ ಫುಡ್ಸ್, ಇನ್‌ಸ್ಟಂಟ್ ಆಹಾರಗಳು, ಬೀದಿ ಬದಿಯ ಜಂಕ್‌ಫುಡ್ಸ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಬಳಕೆಯು ಗಣನೀಯವಾಗಿ ಹೆಚ್ಚಾಗಿದೆ. ಆಕರ್ಷಕ ಪ್ಯಾಕಿಂಗ್ ಮತ್ತು ಸುಲಭ ಪ್ರಾಪ್ಯತೆಯಿಂದಾಗಿ ಹಲವರು ಈ ಆಹಾರಗಳತ್ತ ಸೆಳೆಯಲ್ಪಡುತ್ತಿದ್ದಾರೆ. ಆದರೆ ಈ ಆಹಾರಗಳಲ್ಲಿ ಉಪ್ಪು, ಸಕ್ಕರೆ, ಕೃತಕ ಬಣ್ಣ, ರಾಸಾಯನಿಕ ಅಡಿಟಿವ್‌ಗಳು ಮತ್ತು ಹಾನಿಕಾರಕ ಕೊಬ್ಬಿನ ಅಂಶಗಳು ಹೆಚ್ಚು ಅಂಶದಲ್ಲಿದ್ದು, ದೀರ್ಘಕಾಲದ ಬಳಕೆ ಆರೋಗ್ಯಕ್ಕೆ ಮಾರಕವಾಗಬಹುದು.
ಉದಾಹರಣೆಗೆ ಆಲೂಗಡ್ಡೆ ಚಿಪ್ಸ್‌ನಂತಹ ಆಹಾರದಲ್ಲಿ ಅತಿಯಾಗಿ ಕಾರ್ಬೋಹೈಡ್ರೇಟು, ಉಪ್ಪು, ಕೊಬ್ಬು ಇರುತ್ತದೆ. ಈ ಆಹಾರಗಳು ದೇಹಕ್ಕೆ ಅಗತ್ಯವಲ್ಲದ ಡೋಪಮೈನ್ ರಿಲೀಸ್ ಅನ್ನು ಹೆಚ್ಚಿಸಿ, ಆಹಾರದ ವ್ಯಸನಕ್ಕೆ ಕಾರಣವಾಗುತ್ತವೆ. ಇದು ನಿತ್ಯದ ಆಹಾರದ ಮೇಲೆ ಬೇಸರ ಉಂಟುಮಾಡಿ, ಇನ್ನಷ್ಟು ಜಂಕ್‌ಫುಡ್‌ಗಳ ಬಳಕೆಗೆ ದಾರಿ ತೆರೆದೀತು.

ಅಷ್ಟೆ ಅಲ್ಲದೆ, ಈ ಸಂಸ್ಕರಿತ ಆಹಾರಗಳಿಂದ ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು, ತೂಕ ಹೆಚ್ಚಳ ಮತ್ತು ರಕ್ತದೊತ್ತಡದಂತಹ ದೀರ್ಘಕಾಲಿಕ ಕಾಯಿಲೆಗಳ ಭೀತಿಯೂ ಇದೆ. ಆದ್ದರಿಂದ, ಫುಡ್ ಲೇಬಲಿಂಗ್ ಬಗ್ಗೆ ತಿಳುವಳಿಕೆ ಇರಬೇಕು. ಪ್ರತಿಯೊಂದು ಉತ್ಪನ್ನದಲ್ಲಿ ಇರುವ ಪೋಷಕಾಂಶ, ಉಪ್ಪು, ಸಕ್ಕರೆ, ಟ್ರಾನ್ಸ್ ಫ್ಯಾಟ್ ಪ್ರಮಾಣಗಳನ್ನು ಗಮನಿಸಿ ಸೇವನೆ ಮಾಡುವುದು ಆರೋಗ್ಯಕರ ಜೀವನ ಶೈಲಿಗೆ ಅವಶ್ಯಕ.
ಪೀನಟ್ ಬಟರ್, ಪನ್ನೀರ್, ಟೊಫು ಇಂತಹ ಸಂಸ್ಕರಿತ ಪದಾರ್ಥಗಳು ಕೆಲವೊಮ್ಮೆ ಉಪಯುಕ್ತವಾದರೂ, ಅವುಗಳ ಬಳಕೆ ಮಿತಿಯಲ್ಲಿರಬೇಕೆಂಬುದೇ ಉತ್ತಮ. ನೈಸರ್ಗಿಕ ಆಹಾರವಸ್ತುಗಳು, ಕಡಿಮೆ ಸಂಸ್ಕರಣೆಯೊಂದಿಗೆ ನಮ್ಮ ಆಹಾರ ಪಟ್ಟಿಯಲ್ಲಿರಬೇಕು.