
ನರಸಿಂಹ ದ್ವಾದಶಿ
ಇಂದು ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನು ತೋರಿಸಿದ ಕಡೆ ನರಸಿಂಹ ಪ್ರಕಟಕೊಂಡ ಸುದಿನ. ಹಿರಣ್ಯಕಶ್ಯಪನನ್ನು ಕೊಂದು ಪ್ರಹ್ಲಾದನ ಬಳಿ ಬೇಕಾದ ವರವನ್ನು ಕೇಳಲು ಹೇಳುತ್ತಾನೆ. ಭಗವನ್, ನಿನ್ನ ಬಳಿ ನನ್ನ ಅಪೇಕ್ಷೆಯನ್ನು ಹೇಳಿಕೊಂಡರೆ ನಾನು ಭಕ್ತಿಯ ವ್ಯಾಪಾರವನ್ನು ಮಾಡಿದ ಹಾಗೆ ಆಗುತ್ತದೆ ಎಂದು ನಯವಾಗಿ ಭಗವಂತನ ವರವನ್ನು ತಿರಸ್ಕರಿಸುತ್ತಾನೆ. ಆ ಮೂಲಕ ಇತಿಹಾಸದಲ್ಲಿ ಹಾಗೆಯೇ ನಮ್ಮಲ್ಲಿ ಪ್ರಹ್ಲಾದ ಶಾಶ್ವತವಾಗಿ ಉಳಿದಿದ್ದಾನೆ. ಪ್ರಹ್ಲಾದ ಉಳಿದರೆ ಸಾಕಾಗುವುದಿಲ್ಲ ನಮ್ಮೊಳಗೆ ಪ್ರಹ್ಲಾದನನ್ನು ಉಳಿಸಿಕೊಳ್ಳಬೇಕು. ನಾವು ಸಣ್ಣ ಪೂಜೆಯಲ್ಲೂ ಕೂಡ ನೂರಾರು ಬೇಡಿಕೆಗಳನ್ನು ದೇವರ ಮುಂದೆ ಇಟ್ಟು ಭಕ್ತಿಯ ವ್ಯಾಪಾರವನ್ನು ಮಾಡುತ್ತಿದ್ದೇವೆ. ನಮ್ಮೊಳಗಿರುವ ದೇವನಿಗೆ ಚೆನ್ನಾಗಿ ಗೊತ್ತಿದೆ, ನಮಗೆ ಏನು ಕೊಟ್ಟರೆ ನಾವು ಒಳ್ಳೆಯವರಾಗುತ್ತೇವೆ ಎನ್ನುವುದು. ಆದ್ದರಿಂದ ಆರಾಧನೆ ನಮ್ಮ ಕರ್ತವ್ಯ ಅನುಗ್ರಹ ಅವನಿಗೆ ಬಿಟ್ಟದ್ದು ಎಂದುಕೊಂಡು ಬದುಕಬೇಕು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ