
ಏಪ್ರಿಲ್ 3 ರಂದು ಆಚರಿಸಲಾಗುವ ವರ್ಲ್ಡ್ ಪಾರ್ಟಿ ಡೇ ಎಂಬುದು ಸಂತೋಷ, ಶಾಂತಿ ಮತ್ತು ಏಕತೆಯನ್ನು ಉತ್ತೇಜಿಸುವ ವಿಶ್ವಮಟ್ಟದ ಹಬ್ಬವಾಗಿದೆ. 1995ರಲ್ಲಿ ಪ್ರಕಟವಾದ ವನ್ನಾ ಬೊಂಟಾ ಅವರ Flight: A Quantum Fiction Novel ಕಾದಂಬರಿಯಿಂದ ಪ್ರೇರಿತವಾದ ಈ ದಿನ, ವಿಶ್ವ ಪಾರ್ಟಿ ದಿನದ ಮುಖ್ಯ ಉದ್ದೇಶವೆಂದರೆ, ವಿಶ್ವದ ಎಲ್ಲ ಜನರು ಒಂದು ದಿನವಂತೂ ಯುದ್ಧ, ದ್ವೇಷ ಮತ್ತು ಬೇಧಭಾವವನ್ನು ಮರೆತು ಸಂತೋಷವನ್ನು ಹಂಚಿಕೊಳ್ಳಬೇಕು ಎಂಬುದು. ಈ ದಿನವನ್ನು ಆಚರಿಸುವ ವೇಳೆ, ಪ್ರತಿಯೊಬ್ಬರೂ ತಮ್ಮ ಅನುಭವಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡು, ಹೊಸ ಸ್ನೇಹಗಳನ್ನು ಬೆಳೆಸಿ, ಜೀವನವನ್ನು ಹಬ್ಬದಂತೆಯೇ ಕಾಣಲು ಉತ್ತೇಜಿಸಲ್ಪಡುತ್ತಾರೆ. ಸಂಸ್ಕೃತಿ, ಭಾಷೆ, ಮತ ಮತ್ತು ರಾಷ್ಟ್ರಭೇದವಿಲ್ಲದೆ ಎಲ್ಲರೂ ಒಂದೇ ಸಮಾನತೆಯಿಂದ ಈ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು.

ಇದು ಕೇವಲ ಸಾಮಾನ್ಯ ಪಾರ್ಟಿಯ ದಿನವಲ್ಲ, ವಿಶ್ವಶಾಂತಿ ಮತ್ತು ಸೌಹಾರ್ದತೆಯನ್ನು ಹಬ್ಬಿಸುವ ಒಂದು ಅಭಿಯಾನವೂ ಆಗಿದೆ. ಸಾಮಾಜಿಕ ಜಾಲತಾಣಗಳು, ಸಮುದಾಯ ಕಾರ್ಯಕ್ರಮಗಳು, ಸಂಗೀತ ಕಚೇರಿಗಳು ಮತ್ತು ಸ್ನೇಹಿತರೊಂದಿಗೆ ವಿಶೇಷ ಸಮಯ ಕಳೆಯುವುದರಿಂದ ಈ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಮಾಡಬಹುದು. ಒಟ್ಟಾರೆ, ವಿಶ್ವ ಪಾರ್ಟಿ ದಿನವು ‘ನಾನು ಸಂತೋಷವಾಗಿದ್ದರೆ, ಜಗತ್ತೂ ಸಂತೋಷವಾಗಿರಬಹುದು’ ಎಂಬ ಆಶಯವನ್ನು ಜನರ ಮನಸ್ಸಿನಲ್ಲಿ ಬೇರೂರಿಸಲು ಸಹಾಯಕವಾಗಿದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ