
ಹುಟ್ಟು ಸಾಮಾನ್ಯವಾಗಿರುತ್ತದೆ. ಆದರೆ ಸಾವು ಅಸಾಮಾನ್ಯವಾಗಿರಬೇಕು ಎನ್ನುವುದನ್ನು ತೋರಿಸಿಕೊಟ್ಟವ ಭಗತ್ ಸಿಂಗ್. 1931ರ ಇದೇ ದಿವಸ ಗಲ್ಲು ಶಿಕ್ಷೆಗೆ ಒಳಗಾದದ್ದು.ಇವರ ಒಟ್ಟಿಗೆ ಗೆಳೆತನದ ಪ್ರಭಾವಕ್ಕೆ ಒಳಗಾದ ಸುಖದೇವ್, ಹಾಗೂ ರಾಜಗುರು ಕೂಡ ಇತಿಹಾಸವಾಗಿದ್ದಾರೆ. ಯಾರ ಒಟ್ಟಿಗೆ ನಮ್ಮ ಗೆಳೆತನ ಸಾಗುತ್ತದೆಯೋ ಆ ದಿಕ್ಕಿನಲ್ಲಿ ನಮ್ಮ ಜೀವನ ಸಾಗುತ್ತದೆ ಎನ್ನುವುದಕ್ಕೆ ಇವರುಗಳು ಸಾಕ್ಷಿ. ಬೆಳ್ಳ ಬೆಳಗ್ಗೆ ಎಲ್ಲರೂ ಏಳುವುದಕ್ಕೆ ಮುಂಚೆ ಬ್ರಿಟಿಷರು ಇವರಿಗೆ ಗಲ್ಲು ಶಿಕ್ಷೆಯನ್ನು ಕೊಟ್ಟು ಸೇಟ್ಲೇಜ್ ನದಿಯ ದಡದಲ್ಲಿ ಶವ ಸಂಸ್ಕಾರ ಬಂದು ಮಾಡುತ್ತಿದ್ದರು. ಅಷ್ಟರಲ್ಲಿ ಜನಗಳಿಗೆ ಗೊತ್ತಾಗಿ ಗುಂಪು ಗುಂಪಾಗಿ ಬರತೊಡಗಿದ್ದನ್ನು ಕಂಡು ಅಲ್ಲಿಂದ ಕೂಡಲೆ ಕಾಲ್ಕಿತ್ತರು. ಸಾಯುವಾಗ ಯಾರು ಇಲ್ಲದಿದ್ದರೂ ಕೂಡ ಸತ್ತ ಮೇಲೆ ಇಡೀ ದೇಶ ಕಣ್ಣೀರಿಟ್ಟಿತು.

ಕೊನೆಯ ಕ್ಷಣದಲ್ಲಿ ನಾಲ್ಕು ಜನರಾದರೂ ನಮ್ಮೊಂದಿಗಿರಬೇಕು ಎನ್ನುವಂತೆ ಬದುಕಬೇಕು ಎನ್ನುವ ಮಾತನ್ನು ಕೇಳಿದ್ದೇವೆ, ಆದರೆ ಕೊನೆಯ ಕ್ಷಣದಲ್ಲಿ ಯಾರು ಇಲ್ಲದಿದ್ದರೂ ಕೂಡ ಸತ್ತ ಮೇಲೆ ವಿಷಯ ತಿಳಿದು ಇಡೀ ದೇಶ ಇವತ್ತಿಗೂ ಬೇಸರಿಸುತ್ತಿದೆ. ಸಾಯುವ ಕ್ಷಣದಲ್ಲಿರುವ ಜನ ಮುಖ್ಯವಲ್ಲ, ಸತ್ತ ಮೇಲೆ ಎಷ್ಟು ಜನ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ. 24ನೇ ವಯಸ್ಸಿನಲ್ಲಿ ಭಗತ್ ಸಿಂಗ್ ತನ್ನ ಹೋರಾಟವನ್ನು ಮಾತ್ರವಲ್ಲ ಜೀವನವನ್ನೇ ಮುಕ್ತಾಯಗೊಳಿಸಿದ್ದು. ಆದರೆ ಭಾರತದ ಸ್ವಾತಂತ್ರ್ಯದ ಚರಿತ್ರೆಯಲ್ಲಿ ಆತ ಅಮರ. ಆ ಕಾರಣಕ್ಕಾಗಿ ಈ ದಿವಸ ಹುತಾತ್ಮರ ದಿನ ಎಂದು ಈ ದೇಶ ಆಚರಿಸುತ್ತಿದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ