
ಕೂರ್ಮ ಜಯಂತಿ
ಮಂದರ ಪರ್ವತವನ್ನು ಅಮೃತತ್ವದ ಪ್ರಾಪ್ತಿಗಾಗಿ ದೇವತೆಗಳು ಅಸುರರು ಸೇರಿ ವಾಸುಕಿಯನ್ನು ಹಗ್ಗವನ್ನಾಗಿಸಿ ಕಡೆಯುತ್ತಿದ್ದರು. ಆ ಕಾಲದಲ್ಲಿ ಪರ್ವತ ಮೆಲ್ಲನೆ ಜಾರುತ್ತಿದ್ದದ್ದನ್ನು ಗಮನಿಸಿದ ಭಗವಾನ್ ವಿಷ್ಣು ಕೂರ್ಮ ರೂಪವನ್ನು ತಡೆದು ಪರ್ವತ ಜಾರದಂತೆ ತಡೆದು ನಿಲ್ಲಿಸಿದ. ಆ ಮೂಲಕ ಮಹಾದುಪಕಾರವನ್ನು ಮಾಡಿ ಸಮುದ್ರ ಮಥನದ ಪ್ರಕ್ರಿಯೆಯನ್ನು ಸಾರ್ಥಕ ಗೊಳಿಸಿದ.

ವೈಶಾಖ ಮಾಸದ ಹುಣ್ಣಿಮೆ ಈ ಅವತಾರ ನಡೆದ ಪರ್ವ ದಿನ. ಪರ್ವತ ಚಿರವಾಗಿ ನಿಲ್ಲಿಸಬೇಕು ಎನ್ನುವುದು ಈ ಅವತಾರದ ಹಿನ್ನೆಲೆಯಾದರೆ ನಮ್ಮ ಜೀವನವೆನ್ನುವ ಪರ್ವತ ಅಥವಾ ನಾವೆನ್ನುವ ಪರ್ವತ ಅದು ಸುದೃಢವಾಗಿ ನಿಲ್ಲಬೇಕಾದರೆ ಕೂರ್ಮನ ಅನುಗ್ರಹ ಅತ್ಯಗತ್ಯ. ಆದ್ದರಿಂದ ಭೂಮಿಯನ್ನು ಧರಿಸಿದ ಆದಿಶೇಷನಿಗೂ ಮೂಲದಲ್ಲಿ ಕೂರ್ಮನ ದಿವ್ಯ ಸನ್ನಿಧಾನವಿದೆ. ಆದ್ದರಿಂದ ನಾವು ಸುದೃಢರಾಗಿ ನಿಲ್ಲಬೇಕಾದರೆ ಹಾಗೂ ಎಲ್ಲಿಯೂ ಜಾರದಂತೆ ಬದುಕಬೇಕಾದರೆ ಭಗವಾನ್ ಕೂರ್ಮನ ದಿವ್ಯ ಅನುಗ್ರಹ ಸಿದ್ಧಿಯಾಗಬೇಕು ಆ ಮೂಲಕ ನಾವು ಬದುಕು ಸಾಗಿಸಬೇಕು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ