
ಅಕ್ಷಯ ತೃತೀಯ
ಹೆಸರೇ ಹೇಳುವ ಹಾಗೆ ನಾಶವಿಲ್ಲದ್ದು ಎನ್ನುವ ಕಾರಣದಿಂದ ಈ ದಿನಕ್ಕೆ ಅಕ್ಷಯ ಎನ್ನುವ ವಿಶೇಷತೆ ಗುರುತಿಸಲ್ಪಟ್ಟಿದೆ. ನಿತ್ಯವೂ ನಮ್ಮೊಂದಿಗಿರಬೇಕು ಎನ್ನುವ ಉದ್ದೇಶದಿಂದ ಈ ದಿವಸ ಮಹತ್ವಪೂರ್ಣವಾಗಿದೆ. ಆದ್ದರಿಂದ ಬಂಗಾರವನ್ನು ತೆಗೆದುಕೊಳ್ಳುವುದರಿಂದ ಹಿಡಿದು ಗ್ರಹಪ್ರವೇಶದ ತನಕ ಈ ದಿವಸಕ್ಕೆ ಬಹಳ ಪ್ರಾಶಸ್ತ್ಯವನ್ನು ಇತ್ತೀಚೆಗೆ ಕಾಣುತ್ತಿದ್ದೇವೆ. ಅದೆಲ್ಲವೂ ನಮ್ಮಲ್ಲಿ ತಾಯಿಯಾಗಿರಬೇಕು ಎನ್ನುವ ಮನೋಭಾವವೇ ಇದರ ಹಿಂದಿರುವ ಉದ್ದೇಶ. ಅದೇನೇ ಇರಲಿ ನಮ್ಮೊಂದಿಗೆ ನಿತ್ಯವಾಗಿ ಇರಬೇಕಾದದ್ದು ಭಗವಂತ ಹಾಗು ಆತನ ಅನುಗ್ರಹ. ಆ ಉದ್ದೇಶದಿಂದ ಈ ದಿವಸ ನಾವು ವಿಶೇಷವಾಗಿ ಅವನನ್ನು ಆರಾಧಿಸಿದರೆ ಆತ ನಮ್ಮೊಂದಿಗೆ ಇರುವುದು ಮಾತ್ರವಲ್ಲ ನಮ್ಮನ್ನು ಅಕ್ಷಯವಾಗಿಸುತ್ತಾನೆ.

ವೈಶಾಖಸ್ಯ ಸಿತೇ ಪಕ್ಷೇ ತೃತೀಯಾಕ್ಷಯ ಸ0ಜ್ಞಿತಾ ಎನ್ನುವ ಸ್ಕಾಂದ ಪುರಾಣದ ವಚನದಂತೆ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿವಸ ಅಕ್ಷಯ ತೃತೀಯ ಎಂದು ಗುರುತಿಸಲ್ಪಟ್ಟಿದೆ. ಕೆಲವು ನಂಬಿಕೆಯ ಪ್ರಕಾರ ಈ ದಿವಸ ಪಾಂಡವರು ಅಕ್ಷಯ ಪಾತ್ರೆಯನ್ನು ಪಡೆದುಕೊಂಡರು ಎನ್ನುವ ಪೌರಾಣಿಕ ಹಿನ್ನೆಲೆ ಇದೆ. ಜೈನರಲ್ಲಿ ಬಹುತೇಕವಾಗಿ ಈ ದಿವಸ ಬಹಳಷ್ಟು ಮಹತ್ವಪೂರ್ಣವಾಗಿದೆ. ರಾಜ ಶ್ರೇಯನರು ಋಷಭನಾಥನಿಗೆ ಕಬ್ಬಿನ ರಸವನ್ನು ಕೊಟ್ಟರು ಆ ಮೂಲಕ ನಾಶವಿಲ್ಲದ ಗುರಿಯನ್ನು ಪಡೆದರು ಎನ್ನುವ ಹಿನ್ನೆಲೆ ಇದೆ. ಏನೇ ಇರಲಿ ಹಿರಣ್ಯ ರೂಪನಾದ ಭಗವಂತನ ಅನುಗ್ರಹಕ್ಕೆ ಈ ದಿವಸ ಕಾರಣವಾಗಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ