
ಪ್ರಿಯಳಾದ ಸಖಿಯೊಬ್ಬಳು ಬಳುಕು ವಯ್ಯಾರದಿಂದ ತನ್ನ ಅಭಿಪ್ರಾಯವನ್ನು ತಿಳಿಸಿ, ನಮ್ಮಲ್ಲಿ ಅದನ್ನು ಕಾರ್ಯಗತಗೊಳಿಸುವ ಹಾಗೆ ಕವಿ ಕಾವ್ಯದ ಮೂಲಕ ಸಮಾಜವನ್ನು ತಿದ್ದುತ್ತಾನೆ. ಇದಕ್ಕೆ ಕಾಂತಾ ಸಂಹಿತೆ ಎಂದು ಹೆಸರು. ಸಮಾಜದಲ್ಲಿ ಕವಿಯಿಂದ ಸೃಷ್ಟಿಸಲ್ಪಡುವ ಕಾವ್ಯ ಬಹಳ ಮಹತ್ವಪೂರ್ಣವಾಗಿರುತ್ತದೆ. ದುಶ್ಯಂತ ಶಕುಂತಲೆಯರ ಸಣ್ಣ ಕಥೆ ಕಾಳಿದಾಸನಿಂದ ದೊಡ್ಡ ನಾಟಕವಾಗಿದೆ. ಹೀಗೆ ಸಣ್ಣ ವಿಚಾರಗಳು ಕೂಡ ಬಹಳ ಮಹತ್ವಪೂರ್ಣವನ್ನಾಗಿಸಿ ಸಮಾಜದ ಮುಂದೆ ತಂದು, ಆ ಮೂಲಕ ನೀತಿ, ನಿಯಮ, ಆಚಾರ, ವಿಚಾರವನ್ನು ಹಾಗೂ ಹೊಸ ಚಿಂತನೆಯನ್ನು ಸಮಾಜಕ್ಕೆ ಕೊಡುವ ದೊಡ್ಡ ಕಾರ್ಯ ಕಾವ್ಯದ ಮೂಲಕ ಕವಿ ಮಾಡುತ್ತಾನೆ. ಕಾವ್ಯ ಅದನ್ನು ನಡೆಸಿಕೊಡುತ್ತದೆ. ಅಂತಹ ಮಹಾಕಾವ್ಯಗಳ ನೆನಪಿಗಾಗಿ ಅದರ ಮೆಲುಕಿಗಾಗಿ 1999 ರಿಂದ ಈ ದಿನ ಮೀಸಲಿಟ್ಟಿದೆ. ಕಾವ್ಯ ಕಾಲವನ್ನು, ಕಾಲ ಗತಿಯನ್ನು, ಕಾಲ ಗತಿಯ ಜೀವನ ಪದ್ಧತಿಯನ್ನು, ಎಲ್ಲವನ್ನು ಉಳಿಸಿ ಮುಂದಿನ ಜನಾಂಗಕ್ಕೆ ತೋರಿಸುತ್ತದೆ. ಈ ದೇಶದ ರಾಮಾಯಣ ಆದಿ ಮಹಾ ಕಾವ್ಯವಾಗಿದೆ. ಜಗತ್ತಿಗೆ ದೊಡ್ಡ ಕಾಣಿಕೆಯಾಗಿದೆ. ಆದ್ದರಿಂದ ಈ ದಿವಸ ಕಾವ್ಯ ದಿನ ಎನ್ನುವುದಕ್ಕಿಂತಲೂ ರಾಮಾಯಣದ ದಿನವಾಗಿದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ