
ಸುಮಿತ್ರಾನಂದನ್ ಪಂತ್
ಹಿಂದಿ ಭಾಷೆಯ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮಹಾ ಕವಿ ಸುಮಿತ್ರಾನಂದನ್ ಪಂತ್. 1900 ಮೇ 20ರಂದು ಈಗಿನ ಉತ್ತರಾಖಂಡ ರಾಜ್ಯದ ಕೌಸಾನಿ ಎಂಬ ಜಿಲ್ಲೆಯಲ್ಲಿ ಹುಟ್ಟಿದರು. ತನ್ನ ಕಾಲೇಜ್ ವಿದ್ಯಾಭ್ಯಾಸದ ಸಮಯದಲ್ಲಿ ಸರೋಜಿನಿ ನಾಯ್ಡು ಹಾಗೂ ರವೀಂದ್ರನಾಥ ಟ್ಯಾಗೋರ್ ಇವರಿಂದ ಬಹಳ ಪ್ರಭಾವಿತರಾಗಿ ಕಾವ್ಯ ಲೋಕಕ್ಕೆ ಕಾಲಿಟ್ಟರು. ಭಾರತದ ಪ್ರಾಕೃತಿಕವಾದ ಸೌಂದರ್ಯ ಹಾಗೂ ಗ್ರಾಮೀಣ ಪ್ರದೇಶದ ಮೇಲೆ ಬಹಳಷ್ಟು ಅಭಿಮಾನ ಹೊಂದಿದ್ದ ಇವರು, ತನ್ನ ಕೃತಿಗಳಲ್ಲಿ ಇದರ ಕುರಿತಾಗಿ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದರು.

9 ವರ್ಷಗಳಷ್ಟು ಕಾಲ ಪ್ರಕೃತಿಯೊಂದಿಗೆ ಏಕಾಂತ ಜೀವನವನ್ನು ಸನ್ಯಾಸಿಯಂತೆ ಕಳೆದವರು. ನಂತರ ಗಾಂಧಿಯ ಚಿಂತನೆಗಳಿಗೆ ತನ್ನನ್ನು ಸಮರ್ಪಿಸಿಕೊಂಡು ಕೊನೆಗೆ ಅರವಿಂದ ಘೋಷರ ಶಿಷ್ಯನಾಗಿ ಪಾಂಡಿಚೆರಿಯ ಅವರ ಆಶ್ರಮದಲ್ಲಿ ಬಹಳಷ್ಟು ಕಾಲ ತಂಗಿದ್ದರು. ಸುಮಾರು 28 ಸ್ವಂತ ಕೃತಿಗಳನ್ನು ಬರೆದ ಇವರು 1968ರಲ್ಲಿ ಚಿದಂಬರ ಎನ್ನುವ ಕವನ ಸಂಕಲಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡರು. ಇದಲ್ಲದೆ ಪದ್ಮಭೂಷಣ ಇತ್ಯಾದಿ ಅನೇಕ ಮಹಾಪ್ರಶಸ್ತಿಗಳನ್ನು ಪಡೆದುಕೊಂಡವರು. ತನ್ನ ಕೊನೆಯ ವರ್ಷಗಳನ್ನು ಪ್ರಯಾಗರಾಜದಲ್ಲಿ ಕಳೆದ ಇವರು 1977 ಡಿಸೆಂಬರ್ 28ರಂದು ಇಹಲೋಕ ತ್ಯಜಿಸಿದರು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ