
ರಾಷ್ಟ್ರೀಯ ದಾದಿಯರ ದಿನ
ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತಂಗುವ ಪರಿಸ್ಥಿತಿ ಬಂದಾಗ ಸಾಧಾರಣ ಎಲ್ಲರಿಗೂ ಅಲ್ಲಿ ಬಹಳಷ್ಟು ಉಪಕಾರ ಮಾಡುವುದು ಅಲ್ಲಿಯ ನರ್ಸ್ ಗಳು. ಅದೆಷ್ಟೋ ದಾದಿಯರು ಸ್ವಂತ ಮನೆಯವರಂತೆ ರೋಗಿಗಳನ್ನು ನೋಡಿಕೊಳ್ಳುತ್ತಾರೆ. ಹೆಣ್ತನ ಎನ್ನುವುದೇ ತ್ಯಾಗ ಹಾಗೂ ಕ್ಷಮಾ ಗುಣಕ್ಕೆ ಪ್ರತೀಕ. ಆದ್ದರಿಂದ ಅವರಿಗೆ ಶುಶ್ರೂಷೆ ಮಾಡುವ ಗುಣ ರಕ್ತಗತವಾಗಿ ಬಂದಿರುತ್ತದೆ. ಅದರಲ್ಲೂ ಆಸ್ಪತ್ರೆಯ ದಾದಿಯರಂತೂ ತಮ್ಮನ್ನು ತಾವು ಮನೆಯಲ್ಲಿ ಮಾತ್ರ ಸಮರ್ಪಿಸಿಕೊಳ್ಳದೆ ವೃತ್ತಿ ಕ್ಷೇತ್ರದಲ್ಲೂ ಸೇವಾ ಮನೋಭಾವದಿಂದ ತಾಯ್ತನದ ಗುಣವನ್ನು ಉಣಬಡಿಸುತ್ತಾರೆ. ಆದ್ದರಿಂದ ಅವರ ಗೌರವದ ಪ್ರತೀಕವಾಗಿ ಹಾಗೂ ಅವರ ಬಗ್ಗೆ ಕಾಳಜಿಯ ಸಂಕೇತವಾಗಿ ಈ ದಿವಸವನ್ನು ಅವರಿಗಾಗಿ ಮೀಸಲಾಗಿಟ್ಟಿದೆ. ನೈಟಿಂಗೇಲ್ ಎನ್ನುವ ದಾದಿಯ ಸ್ವರ್ಣಾರ್ಥವಾಗಿ ಈ ದಿವಸವನ್ನು ತೀರ್ಮಾನಿಸಿದ್ದಾರೆ. ನಿಜವಾಗಿ ಈ ಬಗ್ಗೆ ಒಂದು ವಾರವನ್ನು ಮೀಸಲಿಟ್ಟಿದ್ದಾರೆ. ಅದರಲ್ಲಿ ಆರನೇ ತಾರೀಕು ಪ್ರಧಾನವಾಗಿ ಗುರುತಿಸಿಕೊಂಡಿದೆ.

ಅಮೆರಿಕದಂತಹ ದೇಶಗಳಲ್ಲಿ ತಮ್ಮನ್ನು ನೋಡಿಕೊಂಡ ದಾದಿಯರನ್ನು ಕಂಡು ಭೇಟಿಯಾಗಿ ಅವರಿಗೆ ಉಡುಗೊರೆಯನ್ನು ಕೊಟ್ಟು ಬರುವ ಸಂಪ್ರದಾಯವಿದೆ. ಇವತ್ತು ಮನುಷ್ಯ ಎಲ್ಲಿಗೆ ಬೇಕಾದರೂ ಹೋಗದೆ ಇರುತ್ತೇನೆ ಎಂದು ಕೂರಬಹುದು. ಆದರೆ ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಕೂಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಮನುಷ್ಯನ ಜೀವನದೊಂದಿಗೆ ಆಸ್ಪತ್ರೆ, ಹೊಸೆದುಕೊಂಡಿದೆ. ಆಸ್ಪತ್ರೆಯಲ್ಲಿ ನಮ್ಮನ್ನು ನೋಡಿಕೊಳ್ಳುವ ಎಲ್ಲಾ ಜವಾಬ್ದಾರಿ ಕೂಡ ದಾದಿಯರಿಗೆ ಸಂಬಂಧಪಟ್ಟದ್ದು ಆದರಿಂದ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲೇಬೇಕು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ