
ಯುಗಾದಿ ಹಬ್ಬ ಸಮೀಪಿಸುತ್ತಿರುವ ಈ ಸಮಯದಲ್ಲಿ, ತೊಗರಿ ಬೇಳೆ ಹೋಳಿಗೆ ಸವಿಯಲು ಇಚ್ಛಿಸುವವರಿಗೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಗಂಭೀರ ಎಚ್ಚರಿಕೆ ನೀಡಿದ್ದಾರೆ. ತೊಗರಿ ಬೇಳೆಗೆ ರಾಸಾಯನಿಕ ಬಣ್ಣ ಮಿಶ್ರಿತ ಕೇಸರಿ ಬೇಳೆ ಮಿಶ್ರಣ ಮಾಡುವ ಅನೈತಿಕ ಪ್ರವೃತ್ತಿ ಪತ್ತೆಯಾಗಿದೆ. ಈ ಮಿಶ್ರಣದಿಂದ ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಅಂಗವೈಕಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಸರಿ ಬೇಳೆ ಬಣ್ಣ ಮತ್ತು ಆಕಾರದಲ್ಲಿ ತೊಗರಿ ಬೇಳೆಯನ್ನು ಹೋಲುತ್ತದೆ. ಇದು ವಿಷಕಾರಿ ಅಂಶಗಳನ್ನು ಹೊಂದಿದ್ದು, ಮಹಾರಾಷ್ಟ್ರದ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಒಂದು ಕಳೆ ಬೆಳೆಯಾಗಿದೆ. ಈ ಬೇಳೆಯನ್ನು ನಿರಂತರವಾಗಿ ಸೇವಿಸಿದರೆ, “ಲೆಥರಿಸಂ” ಎಂಬ ನರವ್ಯಾಧಿ ಉಂಟಾಗಬಹುದು. ಇದರಿಂದ ಕಾಲುಗಳ ನರಗಳು ಮತ್ತು ಮಾಂಸಪೇಶಿಗಳು ನಾಶವಾಗಿ, ಶಾಶ್ವತ ಅಂಗವೈಕಲ್ಯ ಅಥವಾ ಪಾರ್ಶ್ವವಾಯು ಸಹ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಜೇನು ತುಪ್ಪದಲ್ಲೂ ರಾಸಾಯನಿಕ ಬಣ್ಣದ ದುರ್ವ್ಯವಹಾರ!
ಜೇನು ತುಪ್ಪದಲ್ಲೂ ರಾಸಾಯನಿಕ ಬಣ್ಣ ಬಳಸಿ ಅನಾರೋಗ್ಯಕರವಾದ ಪದಾರ್ಥಗಳನ್ನು ಮಾರಾಟ ಮಾಡುವ ಪ್ರಕರಣಗಳು ಬಹಿರಂಗಗೊಂಡಿವೆ. ಇದರ ಪರಿಣಾಮವಾಗಿ, ರಾಜ್ಯಾದ್ಯಂತ ಮಾರಾಟವಾಗುತ್ತಿರುವ ಜೇನು ತುಪ್ಪದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.

ಪೇಪರ್ ಲೋಟಗಳಿಂದ ಕ್ಯಾನ್ಸರ್ ಅಪಾಯ!
ಆಹಾರ ಸುರಕ್ಷತಾ ಇಲಾಖೆಯು ಪೇಪರ್ ಲೋಟಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರ, ಅವುಗಳ ಬಳಕೆಯಿಂದ ಕ್ಯಾನ್ಸರ್ ಅಪಾಯ ಉಂಟಾಗಬಹುದು ಎಂಬ ಅಂಶ ಬಹಿರಂಗವಾಗಿದೆ. ಪೇಪರ್ ಲೋಟಗಳಲ್ಲಿ ಸುಮಾರು 20% ಪ್ಲಾಸ್ಟಿಕ್ ಬಳಕೆಯಾಗುತ್ತದೆ. ಇದರಿಂದಾಗಿ, ಬಿಸಿ ಟೀ ಅಥವಾ ಕಾಫಿ ಸೇರಿದಾಗ ಪ್ಲಾಸ್ಟಿಕ್ ಕರಗಿ, ಅದರ ವಿಷಕಾರಿ ಅಂಶಗಳು ದೇಹದೊಳಗೆ ಪ್ರವೇಶಿಸುತ್ತವೆ. ಇದು ದೀರ್ಘಕಾಲದಲ್ಲಿ ಕ್ಯಾನ್ಸರ್ ಸಹಿತ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಪ್ಲಾಸ್ಟಿಕ್ ಅಂಶ ಇಲ್ಲದ ಪರಿಸರ ಸ್ನೇಹಿ ಕಪ್ಗಳ ಬಳಕೆಗೆ ಆಹಾರ ಇಲಾಖೆ ಸೂಚನೆ ನೀಡಿದೆ