
“ಹಿತ್ತಲ ಗಿಡ ಮದ್ದಲ್ಲ” ಎಂಬ ಮಾತಿಗೆ ತಕ್ಕಂತೆ, ನಮ್ಮ ಮನೆಗಳ ಹಿತ್ತಲಲ್ಲೇ ಇದ್ದರೂ ಲೆಕ್ಕವಿಲ್ಲದೆ ಬೆಳೆಯುವ ತುಂಬೆ ಗಿಡದ ಔಷಧೀಯ ಮಹತ್ವ ಅನೇಕರಿಗೆ ತಿಳಿದಿಲ್ಲ. ಬಿಳಿ ತುಂಬೆ (White Balsam) ಗಿಡ ವಿಶಿಷ್ಟವಾದ ಆರೋಗ್ಯ ಗುಣಗಳನ್ನು ಹೊಂದಿದ್ದು, ಜ್ವರದಿಂದ ಹಿಡಿದು ತಲೆನೋವಿನವರೆಗಿನ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದಾಗಿದೆ.
ಜ್ವರ ನಿವಾರಣೆಗೆ ಶ್ರೇಷ್ಠ ಮನೆಮದ್ದು
ತುಂಬೆ ಗಿಡದ ಎಲೆಯಿಂದ ತಯಾರಿಸಿದ ಕಷಾಯವು ಜ್ವರದ ತಾಪಮಾನವನ್ನು ಅರ್ಧಗಂಟೆಯೊಳಗೆ ನಿಯಂತ್ರಣಕ್ಕೆ ತರುವ ಸಾಮರ್ಥ್ಯ ಹೊಂದಿದೆ. ಕರಿಮೆಣಸಿನ ಪುಡಿಯನ್ನು ಸೇರಿಸಿ ಕುದಿಸಿದ ಈ ಕಷಾಯ ದೇಹವನ್ನು ತಂಪು ಮತ್ತು ಉತ್ಸಾಹದಿಂದ ಕೂಡಿರಿಸುತ್ತದೆ.
ಕಣ್ಣಿನ ಕೆಳಗಿನ ಕಪ್ಪು ವಲಯಗಳ ಸಮಸ್ಯೆಗೆ ಸಹಾಯಕ
ಒತ್ತಡ, ನಿದ್ರಾಭಾವ, ಗ್ಯಾಜೆಟ್ ಬಳಕೆಯಿಂದ ಬರುವ ಡಾರ್ಕ್ ಸರ್ಕಲ್ಸ್ ಸಮಸ್ಯೆಗೆ ತುಂಬೆ ಗಿಡದ ರಸ ಉತ್ತಮ ಪರಿಹಾರ. ಇದರ ರಸವನ್ನು ಹಾಲಿನಲ್ಲಿ ಅಥವಾ ನೀರಿನಲ್ಲಿ ಮಿಶ್ರ ಮಾಡಿ ಮುಖ ತೊಳೆಯುವದರಿಂದ ತಂಪು ಮತ್ತು ಕಾಂತಿಯುತ ಚರ್ಮ ಸಿಗುತ್ತದೆ.
ಜೀರ್ಣಕ್ರಿಯೆಗೆ ಬಲ ನೀಡುವುದು
ಅಜೀರ್ಣತೆ, ಹೊಟ್ಟೆ ನೋವು, ವಾಂತಿ ಸಮಸ್ಯೆಗಳಿಗೆ ತುಂಬೆ ಗಿಡದ ಕಷಾಯವು ಅತ್ಯುತ್ತಮ. ಬಿಸಿ ನೀರಿನಲ್ಲಿ ಕುದಿಸಿ ಚಿಟಿಕೆ ಉಪ್ಪು ಸೇರಿಸಿದರೆ, ಇದು ಪಚನ ಕ್ರಿಯೆ ಸುಧಾರಿಸುತ್ತದೆ.
ಸಂಧಿ ನೋವಿಗೆ ಉಪಯುಕ್ತವಾದ ಸೂಕ್ತ ಮನೆಮದ್ದು
ತುಂಬೆ ಗಿಡದ ಕಾಂಡವನ್ನು ನೀರಿನಲ್ಲಿ ಕುದಿಸಿ, ಬಟ್ಟೆಗೆ ಆ ನೀರನ್ನು ಚಿಮುಕಿಸಿ ನೋವು ಇರುವ ಜಾಗಕ್ಕೆ ಹಚ್ಚಿದರೆ ಸಡಿಲತನ ಮತ್ತು ಆರಾಮ ಸಿಗುತ್ತದೆ. ಹಳೆಯ ಕಾಲಿನ ನೋವಿಗೆ ಇದು ಶ್ರೇಷ್ಠ ಪರಿಹಾರ.
ತಲೆನೋವಿಗೆ ಬೇಗನೆ ಪರಿಹಾರ
ತುಂಬೆ ಗಿಡದ ಬೇರು, ಎಲೆ, ಕಾಂಡದಿಂದ ತಯಾರಿಸಿದ ಕಷಾಯದ ಹಬೆಯಿಂದ ತಲೆನೋವು ಶಮನವಾಗುತ್ತದೆ. ಇದು ಯಾವುದೇ ಅಡ್ಡ ಪರಿಣಾಮವಿಲ್ಲದ ಸೌಮ್ಯ ಮದ್ದು.

ಸಂಸ್ಕೃತದಲ್ಲಿ “ದ್ರೋಣ ಪುಷ್ಟ” ಎಂದು ಹೆಸರು ಪಡೆದಿರುವ ಈ ಗಿಡದ ಉಪಯೋಗಗಳನ್ನು ಆಯುರ್ವೇದದಲ್ಲಿಯೂ ವಿವರಿಸಲಾಗಿದೆ. ನಮ್ಮ ಸುತ್ತಮುತ್ತಲಿನಲ್ಲಿ ಇದ್ದರೂ ಅಷ್ಟಾಗಿ ಗಮನಿಸದ ಈ ತುಂಬೆ ಗಿಡ ಆರೋಗ್ಯದ ಗೆಳೆಯ ಎನಿಸಿಕೊಳ್ಳುತ್ತದೆ.




































