
ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳ ನಾಡದೋಣಿ ಮೀನುಗಾರರು ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಬೇಕೆಂದು ಆಗ್ರಹಿಸಿ ಬೈಂದೂರು ತಾಲೂಕಿನ ತ್ರಾಸಿ ಕಡಲತೀರದಲ್ಲಿ ಶುಕ್ರವಾರ ಧರಣಿ ನಡೆಸಿದರು. ನೂರಾರು ದೋಣಿಗಳನ್ನು ಸಮುದ್ರದ ತೀರದಲ್ಲಿ ಲಂಗರು ಹಾಕಿ, ಮೀನುಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೀನುಗಾರರು ಅವೈಜ್ಞಾನಿಕ ಲೈಟ್ ಫಿಶಿಂಗ್ ಮತ್ತು ನಿಷೇಧಿತ ಬುಲ್ ಟ್ರಾಲ್ ಬಲೆಗಳಿಂದ ಮೀನಿನ ಸಂತತಿ ತೀವ್ರವಾಗಿ ಹಾಳಾಗುತ್ತಿದ್ದು, ಇದರಿಂದ ಬಡ ನಾಡದೋಣಿ ಮೀನುಗಾರರ ಜೀವನಮಟ್ಟ ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ದೂರಿದರು. ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ಹತ್ತು ದಿನಗಳೊಳಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ರಾಜ್ಯಾದ್ಯಂತ ಬೀದಿಗೆ ಇಳಿದು ಉಗ್ರ ಹೋರಾಟ ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ಮೀನುಗಾರರು ನೀಡಿದರು.
ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ನಾಗೇಶ್ ಖಾರ್ವಿ ಮಾತನಾಡಿ, “ಅವೈಜ್ಞಾನಿಕ ಮೀನುಗಾರಿಕೆ ಬಡ ಮೀನುಗಾರರ ಜೀವನಮಟ್ಟವನ್ನು ಹಾನಿಗೊಳಿಸುತ್ತಿದೆ. ಈ ಸಂಬಂಧ ಮೀನುಗಾರಿಕೆ ಇಲಾಖೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದೀಗ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಹೇಳಿದರು.
ಧರಣಿ ಮುಗಿದ ಬಳಿಕ, ಸಾವಿರಾರು ಮೀನುಗಾರರು ಏಕಾಏಕಿಯಾಗಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಇಳಿದು ಕೆಲಕಾಲ ರಸ್ತೆ ತಡೆದು ಪ್ರತಿಭಟಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಮನವೊಲಿಸಿ ಹೆದ್ದಾರಿ ತೆರವುಗೊಳಿಸಿದರು. ಪ್ರತಿಭಟನೆಯ ವೇಳೆ ಸ್ಥಳೀಯ ಶಾಸಕರಾದ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ ಸೇರಿದಂತೆ ಉಡುಪಿ, ದ.ಕ., ಮತ್ತು ಉತ್ತರ ಕನ್ನಡದ ಸಾವಿರಾರು ಮೀನುಗಾರರು ಭಾಗವಹಿಸಿದ್ದರು.
ಕುಂದಾಪುರ ಡಿ ವೈ ಎಸ್ಪಿ ಬೆಳ್ಳಿಯಪ್ಪ ಕೆ.ಯು. ನೇತೃತ್ವದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸವೀತ್ರ ತೇಜ್ ಮತ್ತು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಮಾಡಿದ್ದರು.