
ಬೆಂಗಳೂರು: ಚೆನ್ನೈ ಮೂಲದ ಗಾಯಕಿ ಸಿವಶ್ರೀ ಸ್ಕಂದ ಪ್ರಸಾದ್ ಅವರ ಜೊತೆ ಯುವ ಸಂಸದ ತೇಜಸ್ವಿ ಸೂರ್ಯ ಸಪ್ತಪದಿ ತುಳಿಯಲಿದ್ದಾರೆ. ದಕ್ಷಿಣ ಲೋಕಸಭಾ ಕ್ಷೇತ್ರದ ಯಂಗ್ ಲೀಡರ್ ಮತ್ತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 2025ರ ಮಾರ್ಚ್ 4ರಂದು ಅವರ ವಿವಾಹ ನಿಶ್ಚಯವಾಗಿದೆ ಎಂದು ಕುಟುಂಬ ಮೂಲಗಳಿಂದ ದೃಢಪಟ್ಟಿದೆ.
ಗಾಯಕಿ ಸಿವಶ್ರೀ ಸ್ಕಂದ ಪ್ರಸಾದ್ ಅವರು ಉತ್ತಮವಾಗಿ ಹಾಡುಗಳನ್ನು ಹಾಡುದರ ಜೊತೆಗೆ ಹರಿಕಥೆ, ಭಜನೆ, ಸೈಕ್ಲಿಂಗ್, ವಾಕ್‌ಥಾನ್ ಮೂಲಕ ಗಮನ ಸೆಳೆಯುತ್ತಾರೆ. ಕಳೆದ ವರ್ಷ ಪ್ರಧಾನಿ ಮೋದಿ ಅವರು ಸಿವಶ್ರೀ ಅವರು ಹಾಡಿದ ರಾಮಾಯಣ ಹಾಡು ಉತ್ತಮವಾಗಿ ಹಾಡಿದರೆಂದು ಟ್ವಿಟ್ಟರ್ ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು.
ಸಂಸದ ತೇಜಸ್ವಿ ಸೂರ್ಯ ಅವರು ರಾಜಕೀಯ ಪ್ರವೇಶಕ್ಕೂ ಮೊದಲೂ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ಇದರ ಜೊತೆಗೆ ಬಿಜೆಪಿಯ ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಮೊದಲಿಗೆ ಕೆಲಸ ಮಾಡಿದ ಅನುಭವ ಅವರಿಗಿದೆ. ಇದಾದ ಮೇಲೆ ಬಿಜೆಪಿ ಪಕ್ಷದ ಪರವಾಗಿ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸಿ ತೇಜಸ್ವಿ ಸೂರ್ಯ ರಾಜಕೀಯ ಗಣ್ಯರ ಗಮನ ಸೆಳೆದಿದ್ದರು.
ಹೀಗಾಗಿಯೇ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ಪಡೆದಿದ್ದರು.
ಲೋಕಸಭಾ ಕ್ಷೇತ್ರದಿಂದ 2024ರಲ್ಲಿ ಮತ್ತೆ ಸ್ಪರ್ಧಿಸಿ 2ನೇ ಬಾರಿಯು 34 ವರ್ಷದ ತೇಜಸ್ವಿ ಸೂರ್ಯ ಗೆಲುವು ಸಾಧಿಸಿ ಪ್ರಸ್ತುತ ಸಂಸದರಾಗಿದ್ದಾರೆ.