
ಕಾಸರಗೋಡು: ಕಾಸರಗೋಡು ಮೂಲದ ಜನಪ್ರಿಯ ಯೂಟ್ಯೂಬರ್ ಒಬ್ಬನನ್ನು ಅಪ್ರಾಪ್ತ ಬಾಲಕಿಗೆ ವಿವಾಹದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೋಝಿಕ್ಕೋಡ್‌ನ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ. ಕೊಡಿಯಮ್ಮೆ ಚೆಪ್ಪಿನಡ್ಕದ ನಿವಾಸಿಯಾಗಿರುವ, “ಸಾಲು ಕಿಂಗ್” ಎಂದೇ ಖ್ಯಾತನಾಗಿರುವ ಮೊಹಮ್ಮದ್ ಸಾಲಿ (35) ಬಂಧಿತ ಆರೋಪಿ. ವಿದೇಶದಿಂದ ಹಿಂದಿರುಗುತ್ತಿದ್ದಾಗ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಇತನನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಸುಮಾರು 7 ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ “ಸಾಲು ಕಿಂಗ್ ಮೀಡಿಯಾ”, “ಸಾಲು ಕಿಂಗ್ ವ್ಲಾಗ್ಸ್”, “ಸಾಲು ಕಿಂಗ್ ಫ್ಯಾಮಿಲಿ” ಮುಂತಾದ ಹೆಸರುಗಳಲ್ಲಿ ಸಕ್ರಿಯನಾಗಿದ್ದ ಸಾಲು ಕಿಂಗ್, ಇಂಟರ್ನೆಟ್‌ನಲ್ಲಿ ಗಮನಾರ್ಹ ಅಭಿಮಾನಿ ಬಳಗವನ್ನು ಹೊಂದಿದ್ದನು. 2016ರಲ್ಲಿ ವಿವಾಹವಾಗಿದ್ದ ಈತನಿಗೆ 3 ಮಕ್ಕಳಿದ್ದಾರೆ.
ಪತ್ನಿಯೊಂದಿಗಿನ ಸಂಬಂಧದಲ್ಲಿ ಬಿರುಕು ಉಂಟಾದ ಸಮಯದಲ್ಲಿ, ಸಾಲು ಕಿಂಗ್ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ 15 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ನಂತರ ಆ ಬಾಲಕಿಗೆ ಮದುವೆಯ ಭರವಸೆ ನೀಡಿ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಆರೋಪಿಯು ವಿದೇಶಕ್ಕೆ ಪರಾರಿಯಾಗಿದ್ದನು. ಕೊಯಿಲಾಂಡಿ ಪೊಲೀಸರು ಈತನನ್ನು ಬಂಧಿಸಲು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದರು. ಶನಿವಾರ ಬೆಳಿಗ್ಗೆ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಕೊಯಿಲಾಂಡಿ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.