
ಕಾರ್ಕಳ: ಮೂರು ರಸ್ತೆ ಬಳಿಯ ಪ್ರಣವ್ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಡಿ.27ರಂದು ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣವನ್ನು ಕಾರ್ಕಳ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಧಾರವಾಡದ ಇರಾನಿ ಕಾಲೋನಿಯ ಮೊಹಮ್ಮದ್ ಅಲಿ ಖಾನ್ ಇರಾನಿ ಅಲಿಯಾಸ್ ಆನಿ ಇರಾನಿ ಎಂಬಾತನನ್ನು ಬಂಧಿಸಲಾಗಿದೆ.
ಬಂಧಿತನಿಂದ 1.78 ಲಕ್ಷ ಮೌಲ್ಯದ 26 ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಜ್ಯುವೆಲ್ಲರ್ಸ್ ಮಾಲೀಕ ಪ್ರಕಾಶ್ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಕಳ ನಗರ ಠಾಣೆ ಪಿಎಸ್ ಐ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಗೋಪಾಲ್, ಸಂತೋಷ್, ಶ್ರೀನಿವಾಸ್, ಸದಾನಂದ್, ದರ್ಶನ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ತಂಡದ ಸಂಘಟಿತ ಕಾರ್ಯಾಚರಣೆಯಿಂದ ಕಳ್ಳತನ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದೆ.
ಆರೋಪಿಗಳ ಪತ್ತೆ ಮತ್ತು ಪ್ರಕರಣವನ್ನು ಭೇದಿಸುತ್ತೇವೆ
ಆರೋಪಿಗಳ ಪತ್ತೆಗೆ ಪೊಲೀಸರು ಆಧುನಿಕ ತಂತ್ರಜ್ಞಾನ ಮತ್ತು ನೆಲಮಟ್ಟದ ಮಾಹಿತಿ ಸಂಗ್ರಹಣೆಯನ್ನು ಬಳಸಿಕೊಂಡರು. ಆರೋಪಿಗಳ ಹಿಂದಿನ ಅಪರಾಧ ಚಟುವಟಿಕೆಗಳ ಆಧಾರದ ಮೇಲೆ ತನಿಖೆ ಮುಂದುವರಿಸಿ, ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬೆಳವಣಿಗೆಯಿಂದ ಸ್ಥಳೀಯರು, ವರ್ತಕರು ಪೊಲೀಸ್ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.