
ಬೆಂಗಳೂರು: ಲೋಕಾಯುಕ್ತ ಡಿವೈಎಸ್‌ಪಿ ಎಂದು ನಂಬಿಸಿ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನನ್ನು ಮುರುಗಪ್ಪ ನಿಂಗಪ್ಪ ಕುಮಾರ್ ಎಂದು ಗುರುತಿಸಲಾಗಿದೆ.
ಬೆಳಗಾವಿ ಮೂಲದ 56 ವರ್ಷದ ಮುರಗಪ್ಪ ಕುಮಾರ್ ಈ ಹಿಂದೆಯೂ ಇಂತಹ ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದನು. ಅವನು ಮೊದಲು ಪೊಲೀಸ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸಿದ್ದರೂ, ಹಲವು ವರ್ಷಗಳ ಹಿಂದೆ ವಜಾಗೊಂಡಿದ್ದ. ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ ಕುಮಾರ್, ಲೋಕಾಯುಕ್ತ ಅಧಿಕಾರಿಯೆಂದು ಸುಳ್ಳು ಹೇಳಿ, ಅವರ ವಿರುದ್ಧ ಅಕ್ರಮ ಆಸ್ತಿ (ಡಿಎ) ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿ ಹಣ ನೀಡುವಂತೆ ಪ್ರೇರೇಪಿಸುತ್ತಿದ್ದ.
ಇತ್ತೀಚೆಗೆ, ಈತ ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜ್ ಆರ್ ಮಗದಮ್ ಅವರಿಗೂ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದ. ಇದರಿಂದ ಅನುಮಾನಗೊಂಡ ಬಸವರಾಜ್ ಅವರು ಪ್ರಕರಣ ದಾಖಲಿಸಿ ದೂರು ನೀಡಿದ ನಂತರ, ಪೊಲೀಸರು ತನಿಖೆ ನಡೆಸಿ ಕುಮಾರನ್ನು ಬಂಧಿಸಿದ್ದಾರೆ.