
ಮುಂಬೈ: ಮುಂಬೈನ ದಿಂಡೋಶಿ ಹೆಚ್ಚುವರಿ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ಡಿ.ಜಿ. ಧೋಬ್ಲೆ ಅವರು ವಾಟ್ಸಪ್‌ನಲ್ಲಿ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ ಆರೋಪಿಯ ಶಿಕ್ಷೆಯನ್ನು ಎತ್ತಿಹಿಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯು ಮಾಜಿ ಕಾರ್ಪೊರೇಟರ್ ಒಬ್ಬರಿಗೆ ರಾತ್ರಿ 11 ರಿಂದ 12.30 ರ ನಡುವೆ “ನೀನು ತೆಳ್ಳಗೆ, ಬೆಳ್ಳಗೆ ಇದ್ದೀಯ, ತುಂಬಾ ಸ್ಮಾರ್ಟ್ ಮತ್ತು ಫೇರ್ ಆಗಿ ಕಾಣ್ತೀಯಾ, ನೀನಂದ್ರೆ ನನಗಿಷ್ಟ” ಎಂಬಂತಹ ಸಂದೇಶಗಳನ್ನು ಕಳುಹಿಸಿದ್ದಾನೆ. ಇದನ್ನು ನ್ಯಾಯಾಲಯ ಅಶ್ಲೀಲತೆಗೆ ಸಮಾನವಾದ ಕ್ರಿಯೆ ಎಂದು ಪರಿಗಣಿಸಿದೆ
ಪ್ರಕರಣದ ವಿವರಗಳ ಪ್ರಕಾರ, ಆರೋಪಿಯು ಮಹಿಳೆಗೆ “ನೀವು ತೆಳ್ಳಗಿದ್ದೀರಿ, ನೀವು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದೀರಿ, ನೀವು ಸುಂದರವಾಗಿದ್ದೀರಿ, ನನ್ನ ವಯಸ್ಸು 40 ವರ್ಷ, ನೀವು ಮದುವೆಯಾಗಿದ್ದೀರಾ ಅಥವಾ ಇಲ್ಲವೇ? ನಾನು ನಿಮ್ಮನ್ನು ಇಷ್ಟಪಡುತ್ತೇನೆ” ಎಂಬ ಸಂದೇಶಗಳನ್ನು ಕಳುಹಿಸಿದ್ದು, ಇದು ಮಹಿಳೆಯ ಘನತೆಗೆ ಧಕ್ಕೆ ತಂದಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ನ್ಯಾಯಾಲಯವು ಇಂತಹ ಸಂದೇಶಗಳು ಮತ್ತು ಫೋಟೋಗಳನ್ನು ಯಾವುದೇ ವಿವಾಹಿತ ಮಹಿಳೆ ಅಥವಾ ಅವರ ಪತಿ ಸಹಿಸಲಾರರು ಎಂದು ತಿಳಿಸಿದೆ. ವಿಶೇಷವಾಗಿ, ದೂರುದಾರರು ಮತ್ತು ಆರೋಪಿ ಪರಸ್ಪರ ಅಪರಿಚಿತರಾಗಿರುವ ಸಂದರ್ಭದಲ್ಲಿ ಇಂತಹ ವರ್ತನೆ ಸಹನೀಯವಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2022ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಘೋಷಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ಆರೋಪಿಯು ಈ ನಿರ್ಧಾರವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ರಾಜಕೀಯ ದ್ವೇಷದ ಕಾರಣದಿಂದಾಗಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ.
ಆದರೆ, ಸೆಷನ್ಸ್ ಕೋರ್ಟ್ ಪ್ರಾಸಿಕ್ಯೂಷನ್ ವಕೀಲರು ಆರೋಪಿಯು ಮಹಿಳೆಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದಾನೆ ಎಂಬುದನ್ನು ಸಾಬೀತುಪಡಿಸಿರುವುದರಿಂದ, ಆರೋಪಿಯನ್ನು ಅಪರಾಧಿ ಎಂದು ಘೋಷಿಸಿದೆ ಎಂಬ ಅಂಶವನ್ನು ಗಮನಿಸಿದೆ. ನ್ಯಾಯಾಲಯವು ಮಹಿಳೆಯ ಘನತೆ ಮತ್ತು ಸುರಕ್ಷತೆಗೆ ಧಕ್ಕೆ ತರುವ ಇಂತಹ ಕ್ರಿಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದೆ.
ಈ ತೀರ್ಪು ಸಾಮಾಜಿಕ ಮಾಧ್ಯಮಗಳ ಮೂಲಕ ಮಹಿಳೆಯರನ್ನು ಕಿರುಕುಳಿಸುವ ಪ್ರಕರಣಗಳಿಗೆ ಕಟ್ಟುನಿಟ್ಟಾದ ನ್ಯಾಯ ವಿಧಾನದ ಅಗತ್ಯವನ್ನು ಎತ್ತಿ ತೋರಿಸುತ್ತದೆ.