
ಚಾಮರಾಜಪೇಟೆಯ ಓಲ್ಡ್ ಪೆನ್ಶನ್ ಮೊಹಲ್ಲಾದ ವಿನಾಯಕನಗರದಲ್ಲಿ ಮೂವರು ಹಸುಗಳ ಮೇಲೆ ನಡೆಸಿದ ಕ್ರೌರ್ಯದ ಪ್ರಕರಣಕ್ಕೆ ಸಂಬಂಧಿಸಿ ಕಾಟನ್ ಪೇಟೆ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ನಿನ್ನೆ ತಡರಾತ್ರಿ ಬಂಧನ ನಡೆದಿದ್ದು, ಸ್ಥಳ ಮಹಜರು ಸೇರಿದಂತೆ ವಿಚಾರಣೆ ಮುಂದುವರಿಯುತ್ತಿದೆ.
ವಿನಾಯಕನಗರದ ನಿವಾಸಿ ಕರ್ಣ ಎಂಬವರ ಮೂರು ಹಸುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕತ್ತರಿಸಿ, ಕಾಲಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕರ್ಣ ರವರು ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಚಿಕ್ಕಪೇಟೆ ಉಪ ವಿಭಾಗದ ಎ ಸಿ ಪಿ ರಮೇಶ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರ ತಂಡ ತನಿಖೆ ನಡೆಸುತ್ತಿದ್ದು, ಪ್ರಕರಣ ತೀವ್ರ ಗಮನ ಸೆಳೆದಿದೆ.
ಹಸುಗಳಿಗೆ ಚಾಮರಾಜಪೇಟೆ ಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವುಗಳು ಪ್ರಾಣಾಪಾಯದಿಂದ ಪಾರಾಗಿವೆ. ಆದರೆ, ಗಾಯಗಳು ಮಾಸಲು ಇನ್ನೂ ಎರಡು ವಾರಗಳ ಕಾಲ ಬೇಕಾಗಿದೆ.
ಈ ಘಟನೆಯ ಬಳಿಕ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ವಿಪಕ್ಷ ನಾಯಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್, ಮತ್ತು ಎಂ ಎಲ್ ಸಿ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಹಸುಗಳ ಮಾಲೀಕರಿಗೆ ಸಾಂತ್ವನ ಹೇಳಿದರು.
ಘಟನೆಯನ್ನು ಖಂಡಿಸಿದ ಆರ್. ಅಶೋಕ್, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು ಮತ್ತು ವೈಯುಕ್ತಿಕವಾಗಿ ₹1 ಲಕ್ಷ ಪರಿಹಾರವನ್ನು ಘೋಷಿಸಿದರು.
ಈ ಪ್ರಕರಣದ ತನಿಖೆ ಸದ್ಯದಲ್ಲೇ ಮುಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.