

ವಿಟ್ಲ: ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಗ್ರಾಮದಲ್ಲಿ, ಖತರ್ನಾಕ್ ಕಳ್ಳರ ತಂಡವೊಂದು ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳಂತೆ ಬಂದು 30 ಲಕ್ಷ ರೂ. ದರೋಡೆ ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಲೈಮಾನ್ ಹಾಜಿ ಎಂಬವರು ಹಲವಾರು ವರ್ಷಗಳಿಂದ ಸಿಂಗಾರಿ ಬೀಡಿ ಸಂಸ್ಥೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಕಳ್ಳರು ಇದನ್ನೇ ಗುರಿಯಾಗಿಸಿಟ್ಟುಕೊಂಡು ಮನೆಗೆ ಬಂದು ಹಣ ದೋಚಿದ್ದಾರೆ. ತಮಿಳುನಾಡು ಮೂಲದ ವಾಹನದಲ್ಲಿ ತಡರಾತ್ರಿ ಆಗಮಿಸಿದ ಆ ತಂಡ, ತಮ್ಮನ್ನು ಇ.ಡಿ. ಅಧಿಕಾರಿಗಳೆಂದು ಗುರುತಿಸಿಕೊಂಡು ಮನೆಗೆ ಪ್ರವೇಶ ಪಡೆದಿದ್ದಾರೆ. ಎರಡು ಗಂಟೆಗಳ ಕಾಲ ತೀವ್ರ ಹುಡುಕಾಟ ಮಾಡುವಹಾಗೆ ನಾಟಕ ಮಾಡಿದರು.
ಅಕ್ರಮ ಹಣ ವ್ಯವಹಾರ ಮತ್ತು ಅವ್ಯವಹಾರಗಳ ಆರೋಪಗಳನ್ನು ಸುಮ್ಮನೆ ತೋರಿಸಿ, ಮನೆಯವರಿಗೆ ಭಯ ಉಂಟುಮಾಡಿ, ತಂಡವು 30 ಲಕ್ಷ ರೂ. ಕೊಂಡೊಯ್ಯುವುದರಲ್ಲಿ ಯಶಸ್ವಿಯಾಯಿತು. ಈ ಘಟನೆಯ ಮಾಹಿತಿ ದೊರೆತ ಕೂಡಲೇ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಘಟನೆಯ ವಿವರ ತಿಳಿಯುತ್ತಿದ್ದಂತೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಕಳ್ಳರ ಈ ಹೊಸ ತಂತ್ರದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಿದ್ದಾರೆ. ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವಂತೆ ಭರವಸೆ ನೀಡಿದ್ದಾರೆ.