
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್‌ಕ್ರಿಲ್‌ನಲ್ಲಿ ಅಚ್ಚರಿಯ ಘಟನೆ ನಡೆದಿದೆ. ಪತಿಯ ಆದಾಯ ಸಾಕಾಗುತ್ತಿಲ್ಲವೆಂದು ಸದಾ ಕಿರುಕುಳ ನೀಡುತ್ತಿದ್ದ ಪತ್ನಿ, ಮಗಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಬೇಕೆಂದು ಪತಿಯನ್ನು ನಿರಂತರ ಒತ್ತಾಯಿಸುತ್ತಿದ್ದಳು. ಕೊನೆಗೆ ಕಿಡ್ನಿ ಮಾರಲು ಪತಿಯನ್ನು ಒತ್ತಾಯಿಸಿ, 10 ಲಕ್ಷ ರೂಪಾಯಿ ಬಂದ ತಕ್ಷಣವೇ ಫೇಸ್‌ಬುಕ್ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.
ಪೀಡಿತ ವ್ಯಕ್ತಿ ವೃತ್ತಿಯಲ್ಲಿ ಪೇಂಟರ್ ಆಗಿದ್ದು, ಪತ್ನಿಯ ಒತ್ತಡದಿಂದ ಬೇಸರಗೊಂಡು ಮಗಳ ಭವಿಷ್ಯದ ಆಸೆಗಾಗಿ ಒಂದು ಕಿಡ್ನಿಯನ್ನು ಮಾರಲು ಒಪ್ಪಿಕೊಂಡಿದ್ದಾನೆ . ಹಣ ಬಂದ ನಂತರ ಪತ್ನಿ ಅದನ್ನು ತನ್ನ ಬಳಿಗೆ ತೆಗೆದುಕೊಂಡು, ನಸುಕಿನ ಜಾವ ಪ್ರೇಮಿಯ ಜೊತೆ ಮನೆ ಬಿಟ್ಟು ಓಡಿಹೋಗಿದ್ದಾಳೆ.
ಅನೇಕ ದಿನಗಳ ಹುಡುಕಾಟದ ನಂತರ, ಪತ್ನಿ ಬಾರೇಕ್‌ಪುರದ ಸುಭಾಷ್ ಕಾಲೋನಿಯಲ್ಲಿ ತನ್ನ ಪ್ರೇಮಿಯೊಂದಿಗೆ ವಾಸಿಸುತ್ತಿರುವುದು ಪತ್ತೆಯಾಗಿದೆ . ಪತಿ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದಾಗ, ಪತ್ನಿ ಹೈಡ್ರಾಮಾ ನಡೆಸಿ, ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ.
ಪತ್ನಿಯ ನಡವಳಿಕೆಯಿಂದ ಆಘಾತಗೊಂಡ ಪತಿ ಇದೀಗ ಪೊಲೀಸರಿಗೆ ದೂರು ನೀಡಿದ್ದು, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. 1994ರಿಂದ ಮಾನವ ಅಂಗಾಂಗ ಮಾರಾಟವನ್ನು ಭಾರತದಲ್ಲಿ ಕಾನೂನುಬಾಹಿರಗೊಳಿಸಲಾಗಿದೆ. ಆದರೆ ದಾನಿಗಳ ಕೊರತೆಯಿಂದಾಗಿ ಈ ದಂಧೆ ಇನ್ನೂ ನಿಂತಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.