
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಬೆಳಗಿನ ಜಾವ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನಕ್ಕೆ ಕುಟುಂಬ ಸಮೇತ ಹೊರಟಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅವರು, “ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಲು ಹೋಗುತ್ತಿದ್ದೇನೆ. ಅಲ್ಲದೆ, ರಾಜ್ಯದ ತಿ.ನರಸೀಪುರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲೂ ಭಾಗವಹಿಸಲು ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ನನ್ನನ್ನು ಆಹ್ವಾನಿಸಿದ್ದಾರೆ. ನಾನು ಸ್ವಾಮೀಜಿಗಳೊಂದಿಗೆ ಸಂವಾದ ನಡೆಸಿದ್ದೇನೆ” ಎಂದು ತಿಳಿಸಿದರು. ಪ್ರಯಾಗ್‌ರಾಜ್‌ನಿಂದ ಹಿಂತಿರುಗಿದ ನಂತರ ಬೆಂಗಳೂರಿನ ಏರ್ ಶೋ ಮತ್ತು ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‌ನಲ್ಲಿ ಭಾಗವಹಿಸಲಿದ್ದೇನೆ ಎಂದು ಅವರು ಹೇಳಿದರು. “ಧರ್ಮ ಮತ್ತು ಅಭಿವೃದ್ಧಿ ಎರಡೂ ಸಮಾನಾಂತರವಾಗಿ ನಡೆಯುತ್ತಿವೆ” ಎಂದು ಡಿಸಿಎಂ ಅವರು ತಿಳಿಸಿದರು. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಲು ಡಿ.ಕೆ.ಶಿವಕುಮಾರ್ ಅವರು ನಿರಾಕರಿಸಿದರು.