
ಹೈದರಾಬಾದ್/ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ರಂಗದಲ್ಲಿ ಇಂದು ಸುರ್ವಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಹೈದರಾಬಾದ್ ಮೂಲದ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್‌ಅಪ್ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ಆರ್ಬಿಟಲ್ ಲಾಂಚ್ ವೆಹಿಕಲ್ ‘ವಿಕ್ರಮ್-1’ (Vikram-1) ಅನ್ನು ಇಂದು ಅಧಿಕೃತವಾಗಿ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಲಾಗಿದೆ.
ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ರಾಕೆಟ್‌ನ ಪೇಲೋಡ್ ಫೇರಿಂಗ್ ಭಾಗಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ವಿಕ್ರಮ್-1 ರಾಕೆಟ್‌ನ ವಿಶೇಷತೆಗಳೇನು?
- ಬೃಹತ್ ಗಾತ್ರ: ಸುಮಾರು 23 ಮೀಟರ್ ಎತ್ತರವಿರುವ ಈ ರಾಕೆಟ್ ಏಳು ಅಂತಸ್ತಿನ ಕಟ್ಟಡದಷ್ಟು ಎತ್ತರವಿದೆ.
- ಅತ್ಯಾಧುನಿಕ ತಂತ್ರಜ್ಞಾನ: ಇದು ಸಂಪೂರ್ಣವಾಗಿ ‘ಕಾರ್ಬನ್ ಕಾಂಪೋಸಿಟ್’ ರಚನೆಯನ್ನು ಹೊಂದಿದ್ದು, ಅತಿ ಕಡಿಮೆ ತೂಕ ಮತ್ತು ಹೆಚ್ಚಿನ ಬಲವನ್ನು ಹೊಂದಿದೆ. ಇದರಲ್ಲಿ 3D ಪ್ರಿಂಟೆಡ್ ದ್ರವ ಇಂಧನ ಇಂಜಿನ್ ಬಳಸಲಾಗಿದೆ.
- ಉಡಾವಣಾ ಸಾಮರ್ಥ್ಯ: ಇದು ಸುಮಾರು 300 ರಿಂದ 350 ಕೆಜಿ ತೂಕದ ಸಣ್ಣ ಸ್ಯಾಟಲೈಟ್‌ಗಳನ್ನು ಭೂಮಿಯ ಕೆಳ ಹಂತದ ಕಕ್ಷೆಗೆ (Low Earth Orbit) ತಲುಪಿಸುವ ಸಾಮರ್ಥ್ಯ ಹೊಂದಿದೆ.
- ಮೇಡ್ ಇನ್ ಇಂಡಿಯಾ: ರಾಕೆಟ್‌ನ ಶೇ. 90ಕ್ಕೂ ಹೆಚ್ಚು ಭಾಗಗಳನ್ನು ಭಾರತದಲ್ಲೇ ತಯಾರಿಸಲಾಗಿದೆ ಎಂಬುದು ವಿಶೇಷ.
ಜೂನ್‌ನಲ್ಲಿ ಉಡಾವಣೆ ಸಾಧ್ಯತೆ: ರಾಕೆಟ್‌ನ ಪ್ರೊಪಲ್ಷನ್ ಹಂತಗಳು ಈಗಾಗಲೇ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವನ್ನು ತಲುಪಿವೆ. ಬಾಕಿ ಉಳಿದ ಭಾಗಗಳು ಮುಂದಿನ ವಾರದೊಳಗೆ ತಲುಪಲಿದ್ದು, ಅಂತಿಮ ಹಂತದ ಪರೀಕ್ಷೆಗಳ ನಂತರ ಜೂನ್ ತಿಂಗಳಲ್ಲಿ ಈ ರಾಕೆಟ್ ಅಧಿಕೃತವಾಗಿ ಉಡಾವಣೆಯಾಗುವ ನಿರೀಕ್ಷೆಯಿದೆ.
ಇಸ್ರೋ (ISRO) ವಿಜ್ಞಾನಿಗಳಾಗಿದ್ದ ಪವನ್ ಕುಮಾರ್ ಚಂದನಾ ಮತ್ತು ನಾಗ ಭರತ್ ದಾಕಾ ಅವರು ಸ್ಥಾಪಿಸಿರುವ ಈ ಸಂಸ್ಥೆಯು ಈಗಾಗಲೇ 2022ರಲ್ಲಿ ‘ವಿಕ್ರಮ್-ಎಸ್’ ಎಂಬ ಸಬ್-ಆರ್ಬಿಟಲ್ ರಾಕೆಟ್ ಉಡಾವಣೆ ಮಾಡಿ ಯಶಸ್ವಿಯಾಗಿತ್ತು. ಈಗ ‘ವಿಕ್ರಮ್-1’ ಮೂಲಕ ಕಕ್ಷೆಗೆ ಉಪಗ್ರಹಗಳನ್ನು ಸೇರಿಸುವ ಮೊದಲ ಖಾಸಗಿ ಭಾರತೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.



































