
ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸ್ಯಾಮ್‌ಸಂಗ್ ಸಂಸ್ಥೆಯು, ಗ್ಯಾಲಕ್ಸಿ S25 ಸರಣಿಯ ಯಶಸ್ಸಿನ ಬೆನ್ನಲ್ಲೇ ಈಗ ಗ್ಯಾಲಕ್ಸಿ S26 (Samsung Galaxy S26) ಲೈನ್‌ಅಪ್ ಪರಿಚಯಿಸಲು ಸಿದ್ಧತೆ ನಡೆಸಿದೆ. ಲಭ್ಯವಿರುವ ಲೀಕ್ ಮಾಹಿತಿಗಳ ಪ್ರಕಾರ, ಈ ಸರಣಿಯು ಬರುವ 2026ರ ಫೆಬ್ರವರಿ 25 ರಂದು ನಡೆಯಲಿರುವ ‘ಗ್ಯಾಲಕ್ಸಿ ಅನ್‌ಪ್ಯಾಕ್ಡ್’ (Galaxy Unpacked) ಈವೆಂಟ್‌ನಲ್ಲಿ ಜಾಗತಿಕವಾಗಿ ಅನಾವರಣಗೊಳ್ಳುವ ಸಾಧ್ಯತೆಯಿದೆ.
ಈ ಸರಣಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S26, ಗ್ಯಾಲಕ್ಸಿ S26 ಪ್ಲಸ್ ಮತ್ತು ಅತ್ಯಂತ ಶಕ್ತಿಶಾಲಿ ಗ್ಯಾಲಕ್ಸಿ S26 ಅಲ್ಟ್ರಾ ಎಂಬ 3 ವಿಭಿನ್ನ ಮಾದರಿಗಳು ಮಾರುಕಟ್ಟೆಗೆ ಬರಲಿವೆ. ಭಾರತೀಯ ಮಾರುಕಟ್ಟೆಯಲ್ಲಿ ಇವು ಮಾರ್ಚ್ 11, 2026 ರಿಂದ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ.
200MP ಕ್ಯಾಮೆರಾ ಮತ್ತು ಬಿಗ್ ಡಿಸ್‌ಪ್ಲೇ ವಿಶೇಷತೆ
ಈ ಸರಣಿಯ ಪ್ರಮುಖ ಆಕರ್ಷಣೆ ಎಂದರೆ ಅದು ಗ್ಯಾಲಕ್ಸಿ S26 ಅಲ್ಟ್ರಾ. ಈ ಫೋನ್ 200MP ಮೆಗಾಪಿಕ್ಸೆಲ್‌ನ ಅತ್ಯಾಧುನಿಕ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರಲಿದ್ದು, ವೃತ್ತಿಪರ ಫೋಟೋಗ್ರಫಿ ಅನುಭವವನ್ನು ನೀಡಲಿದೆ. ಇನ್ನುಳಿದಂತೆ S26 ಮತ್ತು S26 ಪ್ಲಸ್ ಮಾದರಿಗಳು 50MP ಕ್ಯಾಮೆರಾ ಸೆಟಪ್ ಹೊಂದಿರಲಿವೆ. ಡಿಸ್‌ಪ್ಲೇ ವಿಷಯಕ್ಕೆ ಬಂದರೆ, ಅಲ್ಟ್ರಾ ಮಾಡೆಲ್ 6.9 ಇಂಚಿನ ಬೃಹತ್ ಅಮೋಲೆಡ್ ಸ್ಕ್ರೀನ್ ಹೊಂದಿದ್ದರೆ, ಪ್ಲಸ್ ಮಾಡೆಲ್ 6.7 ಇಂಚು ಹಾಗೂ ಬೇಸ್ ಮಾಡೆಲ್ 6.3 ಇಂಚಿನ ಡಿಸ್‌ಪ್ಲೇಯೊಂದಿಗೆ ಬರಲಿವೆ.
ದೈತ್ಯ ಬ್ಯಾಟರಿ ಮತ್ತು ಪವರ್‌ಫುಲ್ ಪ್ರೊಸೆಸರ್
ಬ್ಯಾಟರಿ ಸಾಮರ್ಥ್ಯದಲ್ಲೂ ಸ್ಯಾಮ್‌ಸಂಗ್ ದೊಡ್ಡ ಮಟ್ಟದ ಅಪ್‌ಗ್ರೇಡ್ ಮಾಡಿದೆ. ಗ್ಯಾಲಕ್ಸಿ S26 ಅಲ್ಟ್ರಾ ಫೋನ್ 5,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದ್ದು, ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸಲಿದೆ. ಅಂತೆಯೇ, ಪ್ಲಸ್ ಮಾದರಿಯು 4,900mAh ಮತ್ತು ಸಾಮಾನ್ಯ ಮಾದರಿಯು 4,300mAh ಬ್ಯಾಟರಿ ಪವರ್ ಹೊಂದಿರಲಿವೆ. ಈ ಎಲ್ಲಾ ಫೋನ್‌ಗಳು ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿವೆ ಎಂದು ವರದಿಗಳು ತಿಳಿಸಿವೆ.



































