
ಹೊಸ ವರ್ಷದ ಸಂಭ್ರಮದಲ್ಲಿ ಹೊಸ ಗ್ಯಾಜೆಟ್‌ಗಳನ್ನು ಖರೀದಿಸಬೇಕೆಂಬ ಗ್ರಾಹಕರ ಕನಸಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ. ದೇಶದ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಜನವರಿ ತಿಂಗಳಿನಿಂದ ಎಲ್‌ಇಡಿ ಟಿವಿ, ಸ್ಮಾರ್ಟ್‌ಫೋನ್ ಹಾಗೂ ಇತರ ಡಿಜಿಟಲ್ ಉಪಕರಣಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಏರಿಕೆಗೆ ಪ್ರಮುಖ ಕಾರಣಗಳೇನು? ಪ್ರಸ್ತುತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇರುವುದರಿಂದ, ಚಿಪ್ ತಯಾರಿಕಾ ಕಂಪನಿಗಳು ಎಐ ಸರ್ವರ್‌ಗಳಿಗೆ ಅಗತ್ಯವಿರುವ ‘ಹೈ ಬ್ಯಾಂಡ್‌ವಿಡ್ತ್ ಮೆಮೊರಿ’ (HBM) ಚಿಪ್‌ಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಇದರಿಂದಾಗಿ ಸಾಮಾನ್ಯ ಟಿವಿ ಮತ್ತು ಫೋನ್‌ಗಳಿಗೆ ಬಳಸುವ ಡಿಆರ್‌ಎಎಂ (DRAM) ಹಾಗೂ ಫ್ಲಾಶ್ ಮೆಮೊರಿ ಚಿಪ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಪೂರೈಕೆ ಕಡಿಮೆಯಾಗಿ ಬೇಡಿಕೆ ಹೆಚ್ಚಾದ ಕಾರಣ, ಬಿಡಿಭಾಗಗಳ ದರ ಗಗನಕ್ಕೇರಿದೆ.
ರೂಪಾಯಿ ಮೌಲ್ಯದ ಕುಸಿತದ ಹೊಡೆತ: ಭಾರತದಲ್ಲಿ ತಯಾರಾಗುವ ಬಹುತೇಕ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಅಗತ್ಯವಿರುವ ಓಪನ್ ಸೆಲ್, ಮದರ್ ಬೋರ್ಡ್ ಹಾಗೂ ಸೆಮಿಕಂಡಕ್ಟರ್‌ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 90 ರ ಗಡಿ ದಾಟಿರುವುದು ಆಮದು ವೆಚ್ಚವನ್ನು ಮತ್ತಷ್ಟು ದುಬಾರಿಯಾಗಿಸಿದೆ. ಈ ಹೆಚ್ಚುವರಿ ವೆಚ್ಚದ ಭಾರವನ್ನು ಕಂಪನಿಗಳು ಅನಿವಾರ್ಯವಾಗಿ ಗ್ರಾಹಕರ ಮೇಲೆ ಹಾಕುತ್ತಿವೆ.
ಜಿಎಸ್‌ಟಿ ಕಡಿತದ ಲಾಭಕ್ಕೂ ಕುತ್ತು: ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ 32 ಇಂಚು ಹಾಗೂ ಅದಕ್ಕಿಂತ ಹೆಚ್ಚಿನ ಗಾತ್ರದ ಟಿವಿಗಳ ಮೇಲಿನ ಜಿಎಸ್‌ಟಿಯನ್ನು ಶೇ. 28 ರಿಂದ ಶೇ. 18 ಕ್ಕೆ ಇಳಿಸಿತ್ತು. ಇದರಿಂದ ಟಿವಿಗಳ ಬೆಲೆ ಕಡಿಮೆಯಾಗಿ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿತ್ತು. ಆದರೆ ಈಗ ಎದುರಾಗಿರುವ ಚಿಪ್ ಕೊರತೆ ಮತ್ತು ಕರೆನ್ಸಿ ಮೌಲ್ಯದ ಏರುಪೇರು, ಸರ್ಕಾರ ನೀಡಿದ್ದ ಈ ರಿಯಾಯಿತಿಯ ಲಾಭವನ್ನು ನುಂಗಿ ಹಾಕುವಂತಿದೆ. ಪರಿಣಾಮವಾಗಿ, ಜನವರಿಯಿಂದ ಟಿವಿಗಳ ಬೆಲೆ ಶೇ. 3 ರಿಂದ ಶೇ. 10 ರಷ್ಟು ಹೆಚ್ಚಾಗುವ ಲಕ್ಷಣಗಳಿವೆ.













