
ಆಧುನಿಕ ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿವೆ. ಹ್ಯಾಕರ್‌ಗಳು ಕೇವಲ ತಾಂತ್ರಿಕವಾಗಿ ಮಾತ್ರವಲ್ಲದೆ, ಜನರ ಮನೋವಿಜ್ಞಾನವನ್ನು ಬಳಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ. ಪ್ರಮುಖವಾಗಿ ಎಟಿಎಂ (ATM) ಕಾರ್ಡ್‌ಗಳ ಪಿನ್ ಸಂಖ್ಯೆಯನ್ನು ಊಹಿಸುವಲ್ಲಿ ಹ್ಯಾಕರ್‌ಗಳು ಸಿದ್ಧಹಸ್ತರಾಗಿದ್ದು, ನಾವು ಅತಿ ಸುಲಭ ಎಂದು ಭಾವಿಸುವ ಅಂಕೆಗಳೇ ನಮ್ಮ ಬ್ಯಾಂಕ್ ಖಾತೆಗೆ ಕುತ್ತು ತರಬಲ್ಲವು ಎಂದು ಸೈಬರ್ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ನಮ್ಮಲ್ಲಿ ಅನೇಕರು ಸುಲಭವಾಗಿ ನೆನಪಿಟ್ಟುಕೊಳ್ಳುವ ಉದ್ದೇಶದಿಂದ ಸತತ ಅಂಕೆಗಳಾದ 1234, 4321 ಅಥವಾ 5678 ನಂತಹ ಸಂಖ್ಯೆಗಳನ್ನು ಪಿನ್ ಆಗಿ ಇಡುತ್ತಾರೆ. ಇನ್ನು ಕೆಲವರು ಏಕ ಅಂಕೆಗಳಾದ 1111, 0000 ಅಥವಾ 5555 ಅನ್ನು ಬಳಸುತ್ತಾರೆ. ಆದರೆ, ಹ್ಯಾಕರ್‌ಗಳು ಯಾವುದೇ ಖಾತೆಯನ್ನು ಹ್ಯಾಕ್ ಮಾಡುವಾಗ ಮೊದಲು ಪ್ರಯತ್ನಿಸುವ ಅಂಕೆಗಳೇ ಇವುಗಳಾಗಿವೆ. ಇಂತಹ ‘ದುರ್ಬಲ ಪಿನ್’ಗಳಿಂದಾಗಿ ನಿಮ್ಮ ಕಷ್ಟದ ದುಡಿಮೆ ಕ್ಷಣಾರ್ಧದಲ್ಲಿ ಮಾಯವಾಗಬಹುದು. ವ್ಯಕ್ತಿಗತ ಮಾಹಿತಿಗಳಾದ ಜನ್ಮ ದಿನಾಂಕ, ಹುಟ್ಟಿದ ವರ್ಷ ಅಥವಾ ಮೊಬೈಲ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನು ಪಿನ್ ಆಗಿ ಬಳಸುವುದು ಅತ್ಯಂತ ಅಸುರಕ್ಷಿತ ಎಂದು ತಜ್ಞರು ತಿಳಿಸಿದ್ದಾರೆ.
ಸುರಕ್ಷತೆಯ ದೃಷ್ಟಿಯಿಂದ ಯಾರೂ ಸುಲಭವಾಗಿ ಊಹಿಸಲಾಗದ 4892 ಅಥವಾ 3927 ನಂತಹ ವಿಶಿಷ್ಟ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಅಲ್ಲದೆ, ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಕಾರ್ಡ್‌ಗಳಿದ್ದರೆ ಎಲ್ಲದಕ್ಕೂ ಒಂದೇ ಪಿನ್ ಇಡಬಾರದು. ಕನಿಷ್ಠ 6 ರಿಂದ 12 ತಿಂಗಳಿಗೊಮ್ಮೆ ಪಿನ್ ಬದಲಾಯಿಸುವುದು ಮತ್ತು ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಬರುವ ಕರೆಗಳಿಗೆ ಯಾವುದೇ ಕಾರಣಕ್ಕೂ ಪಿನ್ ಹಂಚಿಕೊಳ್ಳದಿರುವುದು ನಿಮ್ಮ ಹಣಕಾಸಿನ ಭದ್ರತೆಗೆ ಅನಿವಾರ್ಯವಾಗಿದೆ.




































