
ದೇಶಾದ್ಯಂತ ಮಹಿಳಾ ಕ್ರಿಕೆಟ್‌ಗೆ ಭಾರಿ ಉತ್ತೇಜನ ನೀಡುವ ದೃಷ್ಟಿಯಿಂದ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಒಂದು ಹೊಸ ಹೆಜ್ಜೆಯನ್ನಿಟ್ಟಿದೆ. 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗಾಗಿ ಕೇವಲ ₹100ಕ್ಕೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಇತಿಹಾಸದಲ್ಲೇ ಅತ್ಯಂತ ಕಡಿಮೆ ಟಿಕೆಟ್ ಬೆಲೆಯಾಗಿದ್ದು, ಪ್ರಪಂಚದಾದ್ಯಂತ ಕ್ರೀಡಾಪ್ರೇಮಿಗಳನ್ನು ಅಚ್ಚರಿಗೊಳಿಸಿದೆ. ದುರಂತವೆಂದರೆ, ಭದ್ರತಾ ಮತ್ತು ಸುರಕ್ಷತೆಯ ಕಾರಣಗಳಿಂದಾಗಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದು, ಬೆಂಗಳೂರಿನ ಕ್ರಿಕೆಟ್ ಅಭಿಮಾನಿಗಳಿಗೆ ಈ ಅಪರೂಪದ ಅವಕಾಶ ತಪ್ಪಿಹೋಗಿದೆ.
ಮಹಿಳಾ ಕ್ರಿಕೆಟ್ ಜನಪ್ರಿಯಗೊಳಿಸುವ ಗುರಿ: ಸಾಮಾನ್ಯವಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಟಿಕೆಟ್‌ಗಳ ಬೆಲೆ ಸಾವಿರಾರು ರೂಪಾಯಿಗಳನ್ನು ದಾಟಿರುತ್ತದೆ. ಐಪಿಎಲ್ ಪಂದ್ಯಗಳಲ್ಲೂ ಟಿಕೆಟ್‌ಗಳು ಕನಿಷ್ಠ ₹500 ರಿಂದ ಪ್ರಾರಂಭವಾಗುತ್ತವೆ. ಇಂತಹ ಸಂದರ್ಭದಲ್ಲಿ, ಮಹಿಳಾ ಕ್ರಿಕೆಟ್ ಹೆಚ್ಚು ಜನರನ್ನು ತಲುಪಬೇಕು ಮತ್ತು ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ಕಣ್ತುಂಬಿಕೊಳ್ಳಬೇಕು ಎಂಬ ಉದ್ದೇಶದಿಂದ ICC ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ.
ಟಿಕೆಟ್ ಖರೀದಿಯ ಸುಲಭ ವಿಧಾನ: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ಸೆಪ್ಟೆಂಬರ್ 30 ರಿಂದ ನವೆಂಬರ್ 2, 2025ರವರೆಗೆ ನಡೆಯಲಿದೆ. ಈ ಟೂರ್ನಿಗಾಗಿ ಟಿಕೆಟ್‌ಗಳನ್ನು ಗೂಗಲ್ ಪೇ ಮೂಲಕವೂ ಖರೀದಿಸಬಹುದಾಗಿದೆ. ಇದರಿಂದಾಗಿ ಅಭಿಮಾನಿಗಳು ತಾವು ಕುಳಿತಲ್ಲಿಂದಲೇ ಸುಲಭವಾಗಿ ಟಿಕೆಟ್ ಪಡೆಯಬಹುದು. ಈ ವಿಶೇಷ ಟಿಕೆಟ್‌ಗಳು ಗೂಗಲ್ ಪೇ ಮೂಲಕ ಸೆಪ್ಟೆಂಬರ್ 8ರವರೆಗೆ ಲಭ್ಯವಿರಲಿದ್ದು, ಸೆಪ್ಟೆಂಬರ್ 9 ರಿಂದ ಎಂದಿನಂತೆ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ICC ತಿಳಿಸಿದೆ.
ಹಿಂದಿನ ಟೂರ್ನಿಗಿಂತ ಕಡಿಮೆ ಬೆಲೆ: ಹಿಂದಿನ ವಿಶ್ವಕಪ್ ಟೂರ್ನಿ ನ್ಯೂಜಿಲೆಂಡ್‌ನಲ್ಲಿ ನಡೆದಾಗ, ಮಕ್ಕಳಿಗೆ ₹350 ಮತ್ತು ವಯಸ್ಕರಿಗೆ ₹850 ಟಿಕೆಟ್ ದರವನ್ನು ನಿಗದಿಪಡಿಸಲಾಗಿತ್ತು. ಈ ಬಾರಿ ಬೆಲೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸಿರುವ ICC ಮತ್ತು Google, ಈ ಕ್ರಮದಿಂದಾಗಿ ಕ್ರೀಡಾಂಗಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುವ ನಿರೀಕ್ಷೆಯಲ್ಲಿದ್ದಾರೆ.