
ತಂತ್ರಜ್ಞಾನ ಲೋಕದಲ್ಲಿ ಉಂಟಾಗಿರುವ ತಲ್ಲಣವೊಂದು ಇದೀಗ ಸಾಮಾನ್ಯ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಸಿದ್ಧವಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಬ್ಬರದಿಂದಾಗಿ ಜಾಗತಿಕವಾಗಿ ಸೆಮಿಕಂಡಕ್ಟರ್ ಚಿಪ್‌ಗಳ ಲಭ್ಯತೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಮುಂಬರುವ 2 ತಿಂಗಳ ಅವಧಿಯಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಹಾಗೂ ಟಿವಿಗಳ ದರವು ಶೇ. 8 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಪ್ರಸ್ತುತ ಎಐ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಸಾಮರ್ಥ್ಯದ ಚಿಪ್‌ಗಳ ಅವಶ್ಯಕತೆಯಿದೆ. ಉತ್ಪಾದನಾ ಕಂಪನಿಗಳು ಹೆಚ್ಚಿನ ಲಾಭದ ಉದ್ದೇಶದಿಂದ ಎಐ ಆಧಾರಿತ ಚಿಪ್‌ಗಳ ತಯಾರಿಕೆಗೆ ಆದ್ಯತೆ ನೀಡುತ್ತಿರುವುದರಿಂದ, ಗ್ರಾಹಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬಳಸುವ ಚಿಪ್‌ಗಳ ಪೂರೈಕೆಯಲ್ಲಿ ಇಳಿಕೆಯಾಗಿದೆ. ಕೇವಲ ಗ್ಯಾಜೆಟ್‌ಗಳು ಮಾತ್ರವಲ್ಲದೆ, ಹಳೆಯ ಮಾದರಿಯ ಚಿಪ್‌ಗಳನ್ನು ಅವಲಂಬಿಸಿರುವ ವಾಹನ ಉದ್ಯಮವೂ ಉತ್ಪಾದನಾ ಕುಂಠಿತದ ಭೀತಿ ಎದುರಿಸುತ್ತಿದೆ. ಹೊಸ ಚಿಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಕನಿಷ್ಠ 3 ರಿಂದ 5 ವರ್ಷಗಳ ಕಾಲಾವಕಾಶ ಬೇಕಿರುವುದರಿಂದ, ಈ ಬಿಕ್ಕಟ್ಟು 2028 ರವರೆಗೆ ಮುಂದುವರಿಯುವ ಲಕ್ಷಣಗಳಿವೆ.



































