
ಹೊಸ ವರ್ಷದ ಆರಂಭದಲ್ಲೇ ಗ್ಯಾಜೆಟ್ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಖ್ಯಾತ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ತನ್ನ ಬಹುನಿರೀಕ್ಷಿತ ‘ರಿಪಬ್ಲಿಕ್ ಡೇ ಸೇಲ್ 2026’ ದಿನಾಂಕವನ್ನು ಘೋಷಣೆ ಮಾಡಿದ್ದು, ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬೆಲೆ ಸಮರಕ್ಕೆ ನಾಂದಿ ಹಾಡಿದೆ. ಜನವರಿ 17 ರಿಂದ 26 ರವರೆಗೆ ನಡೆಯಲಿರುವ ಈ ಹತ್ತು ದಿನಗಳ ಬೃಹತ್ ಮಾರಾಟ ಮೇಳದಲ್ಲಿ, ಪ್ರೀಮಿಯಂ ಐಫೋನ್‌ಗಳಿಂದ ಹಿಡಿದು ಬಜೆಟ್ ಸ್ನೇಹಿ ಫೋನ್‌ಗಳವರೆಗೆ ಅಚ್ಚರಿಯ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ವಿಶೇಷವಾಗಿ ಆಪಲ್ ಪ್ರಿಯರಿಗೆ ಈ ಬಾರಿ ದೊಡ್ಡ ಲಾಭ ಕಾದಿದೆ. ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಐಫೋನ್ 16 ಈಗ ಕೇವಲ 56,999 ರೂಪಾಯಿಗಳ ಆರಂಭಿಕ ಬೆಲೆಗೆ ಲಭ್ಯವಾಗಲಿದೆ. ಇನ್ನು ಗೂಗಲ್‌ನ ಇತ್ತೀಚಿನ ಪಿಕ್ಸೆಲ್ 10 ಸ್ಮಾರ್ಟ್‌ಫೋನ್ ಮೇಲೆ ಬರೊಬ್ಬರಿ 14,000 ರೂಪಾಯಿಗಳಷ್ಟು ಕಡಿತ ಮಾಡಲಾಗಿದ್ದು, 60,999 ರೂಪಾಯಿಗಳಿಗೆ ಗ್ರಾಹಕರ ಕೈಸೇರಲಿದೆ. ಮೋಟೋರೋಲಾ ಎಡ್ಜ್ 60 ಫ್ಯೂಷನ್ ಮತ್ತು ವಿವೋದ ಟಿ4 ಸರಣಿಯ ಫೋನ್‌ಗಳು ಮಧ್ಯಮ ವರ್ಗದ ಗ್ರಾಹಕರನ್ನು ಸೆಳೆಯಲು ಸಜ್ಜಾಗಿವೆ. ನಥಿಂಗ್ ಕಂಪನಿಯ ಫೋನ್ 3a ಪ್ರೊ ಕೂಡ ತನ್ನ ಮೂಲ ಬೆಲೆಗಿಂತ ಗಣನೀಯವಾಗಿ ಇಳಿಕೆ ಕಂಡಿದೆ.
ಈ ರಿಯಾಯಿತಿ ದರಗಳಲ್ಲಿ ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್‌ಚೇಂಜ್ ಬೋನಸ್‌ಗಳು ಸೇರಿವೆ ಎಂಬುದು ಗಮನಾರ್ಹ. ಹೆಚ್‌ಡಿಎಫ್‌ಸಿ (HDFC) ಬ್ಯಾಂಕ್ ಕಾರ್ಡ್ ಹೊಂದಿರುವವರಿಗೆ ಶೇಕಡಾ 10 ರಷ್ಟು ಹೆಚ್ಚುವರಿ ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಒಂದು ದಿನ ಮೊದಲೇ ಅಂದರೆ ಜನವರಿ 16 ರಿಂದಲೇ ಈ ಆಫರ್‌ಗಳನ್ನು ಪಡೆಯುವ ವಿಶೇಷ ಅವಕಾಶ ನೀಡಲಾಗಿದೆ. ಗೃಹೋಪಯೋಗಿ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣಗಳ ಮೇಲೆಯೂ ಕಣ್ಸೆಳೆಯುವ ಆಫರ್‌ಗಳಿದ್ದು, ಹಳೆಯ ಫೋನ್ ಬದಲಾಯಿಸಿ ಹೊಸ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಆಗಲು ಇದು ಸೂಕ್ತ ಸಮಯವಾಗಿದೆ.



































