
ಪ್ರತಿದಿನ ಬರುವ ಅನಗತ್ಯ ಸ್ಪ್ಯಾಮ್ ಕರೆಗಳು (Spam Calls) ಮತ್ತು ಟೆಲಿಮಾರ್ಕೆಟಿಂಗ್ ಕರೆಗಳಿಂದ ಕಿರಿಕಿರಿ ಅನುಭವಿಸುತ್ತಿದ್ದೀರಾ? ಈ ಕರೆಗಳು ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವುದಲ್ಲದೆ, ಕೆಲವೊಮ್ಮೆ ಪ್ರಮುಖ ಕರೆಗಳನ್ನು ತಪ್ಪಿಸಿ ವಂಚನೆಗಳಿಗೆ ದಾರಿ ಮಾಡಿಕೊಡುತ್ತವೆ. ಇಂತಹ ತೊಂದರೆಗಳಿಂದ ಮುಕ್ತಿ ಪಡೆಯಲು ಮತ್ತು ಅನಗತ್ಯ ಕರೆಗಳನ್ನು ನಿರ್ಬಂಧಿಸಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬಹುದು.
1. DND (Do Not Disturb) ಸೇವೆಯನ್ನು ಸಕ್ರಿಯಗೊಳಿಸಿ
ಟೆಲಿಮಾರ್ಕೆಟಿಂಗ್ ಕಂಪನಿಗಳಿಂದ ಬರುವ ಕರೆಗಳನ್ನು ನಿಯಂತ್ರಿಸಲು ಸರ್ಕಾರವು ಡಿಎನ್‌ಡಿ (DND) ಸೇವೆಯನ್ನು ಕಡ್ಡಾಯಗೊಳಿಸಿದೆ. ನಿಮ್ಮ ಸಿಮ್ ಕಾರ್ಡ್ (Airtel, Jio, Vi ಇತ್ಯಾದಿ) ಗೆ ಅನುಗುಣವಾಗಿ ಈ ಸೇವೆಯನ್ನು ಸಕ್ರಿಯಗೊಳಿಸಬಹುದು:
- ಆ್ಯಪ್ ಮೂಲಕ: ನಿಮ್ಮ ಮೊಬೈಲ್ ನೆಟ್‌ವರ್ಕ್ ಒದಗಿಸುವ Airtel, Jio ಅಥವಾ Vi ಆ್ಯಪ್‌ಗಳಿಗೆ ಭೇಟಿ ನೀಡಿ. ಅಲ್ಲಿ ‘ಸೆಟ್ಟಿಂಗ್‌ಗಳು’ ಅಥವಾ ‘ಸೇವೆಗಳು’ ವಿಭಾಗಕ್ಕೆ ಹೋಗಿ ‘DND’ ಆಯ್ಕೆಯನ್ನು ಹುಡುಕಿ ಸಕ್ರಿಯಗೊಳಿಸಿ.
- ಎಸ್‌ಎಂಎಸ್ ಅಥವಾ ಕರೆ ಮೂಲಕ: ನಿಮ್ಮ ಫೋನ್‌ನಲ್ಲಿರುವ ಸಂದೇಶ ಅಪ್ಲಿಕೇಶನ್‌ಗೆ ಹೋಗಿ ‘FULLY BLOCK’ ಎಂದು ಟೈಪ್ ಮಾಡಿ 1909 ಸಂಖ್ಯೆಗೆ ಕಳುಹಿಸಿ. ಅಥವಾ 1909 ಸಂಖ್ಯೆಗೆ ಕರೆ ಮಾಡಿ, ಟೆಲಿಮಾರ್ಕೆಟಿಂಗ್ ಕರೆಗಳನ್ನು ನಿರ್ಬಂಧಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. ಈ ಕ್ರಮವು ಸ್ವಯಂಚಾಲಿತ ಕರೆಗಳನ್ನು ಸಾಕಷ್ಟು ಮಟ್ಟಿಗೆ ತಡೆಯುತ್ತದೆ.
2. ಗೂಗಲ್ ಡಯಲರ್ ಬಳಸಿ ಸ್ಪ್ಯಾಮ್ ಕರೆಗಳನ್ನು ಫಿಲ್ಟರ್ ಮಾಡಿ
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಸುವವರು ಹೆಚ್ಚು ಪರಿಣಾಮಕಾರಿಯಾಗಿ ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸಬಹುದು.
- ಮೊದಲಿಗೆ, ನಿಮ್ಮ ಫೋನ್‌ಗೆ Google ಡಯಲರ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಅದನ್ನು ಡೀಫಾಲ್ಟ್ ಡಯಲರ್ ಆಗಿ ಸೆಟ್ ಮಾಡಿ.
- ನಂತರ Google ಡಯಲರ್ ಆ್ಯಪ್‌ಗೆ ಹೋಗಿ, ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ (ಮೆನು) ಮೇಲೆ ಕ್ಲಿಕ್ ಮಾಡಿ.
- ‘ಸೆಟ್ಟಿಂಗ್‌ಗಳು’ ವಿಭಾಗದಲ್ಲಿ, ‘ಕಾಲರ್ ಐಡಿ ಮತ್ತು ಸ್ಪ್ಯಾಮ್’ (Caller ID and Spam) ಆಯ್ಕೆಯನ್ನು ಆರಿಸಿ.
- ಅದರ ಮೇಲೆ ಕ್ಲಿಕ್ ಮಾಡಿದಾಗ ಕಾಣುವ ‘Enable Filter Spam Calls’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಸಕ್ರಿಯಗೊಳಿಸಿ.
ಈ ಸೆಟ್ಟಿಂಗ್ ಅನ್ನು ಆನ್ ಮಾಡುವುದರಿಂದ, ಫೋನ್ ಸ್ವಯಂಚಾಲಿತವಾಗಿ ತಿಳಿದಿರುವ ಎಲ್ಲಾ ಸ್ಪ್ಯಾಮ್ ಮತ್ತು ವಂಚನೆಯ ಕರೆಗಳನ್ನು ನಿರ್ಬಂಧಿಸುತ್ತದೆ, ಇದರಿಂದ ಅನಗತ್ಯ ಕಿರಿಕಿರಿ ಸಂಪೂರ್ಣವಾಗಿ ತಪ್ಪುತ್ತದೆ.













