
ಮುಂಬೈ: ಭಾರತೀಯ ಟಿ20 ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟರ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅವರು ಆಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಭಾನುವಾರ ಮುಂಬೈನಲ್ಲಿರುವ ಪೇಜಾವರ ಮಠದ ಶಾಖೆಗೆ ಭೇಟಿ ನೀಡಿದ ಅವರು, ಉಡುಪಿ ಪೇಜಾವರ ಅಧೋಕ್ಷಜ ಮಠದ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದರ್ಶನ ಪಡೆದರು.
ಈ ಭಕ್ತಿಯ ಪಯಣದಲ್ಲಿ ಸೂರ್ಯಕುಮಾರ್ ಅವರಿಗೆ ಪತ್ನಿ ದೇವೀಶಾ ಶೆಟ್ಟಿ ಕೂಡ ಸಾಥ್ ನೀಡಿದ್ದರು. ದಂಪತಿಗಳು ಶ್ರೀಗಳ ಪಾದಪೂಜೆ ನೆರವೇರಿಸಿ, ವಿಶೇಷ ಗೌರವ ಸಮರ್ಪಿಸಿದರು. ಮೈದಾನದಲ್ಲಿ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತುವ ‘ಮಿಸ್ಟರ್ 360’ ಖ್ಯಾತಿಯ ಸೂರ್ಯ, ಶ್ರೀಗಳ ಮುಂದೆ ಅತ್ಯಂತ ವಿನಮ್ರರಾಗಿ ಕುಳಿತು ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ಸೂರ್ಯಕುಮಾರ್ ಯಾದವ್ ಅವರ ಕ್ರೀಡಾ ಸಾಧನೆಯನ್ನು ಶ್ಲಾಘಿಸಿ, ಮುಂದಿನ ಸರಣಿಗಳಲ್ಲಿ ಭಾರತ ತಂಡಕ್ಕೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹರಸಿದರು. ಕ್ರಿಕೆಟ್ ಜಗತ್ತಿನ ತಾರೆ ತಮ್ಮ ಬಿಡುವಿನ ವೇಳೆಯಲ್ಲಿ ಪತ್ನಿಯೊಂದಿಗೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ತಮ್ಮ ಸಂಸ್ಕೃತಿ ಮತ್ತು ನಂಬಿಕೆಯನ್ನು ಪ್ರದರ್ಶಿಸಿದ್ದಾರೆ.



































