
ಇಂದೋರ್: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಯು ತನ್ನ ಪ್ರದರ್ಶನ ಪ್ರವಾಸದ ಭಾಗವಾಗಿ ಮಧ್ಯಪ್ರದೇಶದ ಇಂದೋರ್‌ಗೆ ಆಗಮಿಸಿದ್ದು, ನಗರದಾದ್ಯಂತ ಅದ್ಧೂರಿ ಸ್ವಾಗತ ದೊರೆತಿದೆ. ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಐದು ನಗರಗಳಲ್ಲಿ ಇಂದೋರ್ ಕೂಡ ಒಂದು. ಈ ಪ್ರವಾಸದ ಸಂದರ್ಭದಲ್ಲಿ ಟ್ರೋಫಿಯನ್ನು ನಗರದ ಐತಿಹಾಸಿಕ ಮತ್ತು ಪ್ರಮುಖ ಸ್ಥಳಗಳಾದ ರಾಜವಾಡಾ ಅರಮನೆ, ಗಾಂಧಿ ಹಾಲ್, ಸೆಂಟ್ರಲ್ ಮ್ಯೂಸಿಯಂ, ಸಿರಪುರ್ ಲೇಕ್ ಮತ್ತು ಪಿತ್ರಾ ಪರ್ವತಗಳಲ್ಲಿ ಪ್ರದರ್ಶನಕ್ಕೆ ಇಡಲಾಯಿತು.
ಈ ಐದು ದಿನಗಳ ಪ್ರವಾಸದಲ್ಲಿ, ನಗರದ ಅನೇಕ ಶಾಲೆಗಳಿಗೆ ಟ್ರೋಫಿಯನ್ನು ಕೊಂಡೊಯ್ಯಲಾಯಿತು. ವಿದ್ಯಾರ್ಥಿಗಳು ಟ್ರೋಫಿಯನ್ನು ಉತ್ಸಾಹದಿಂದ ಬರಮಾಡಿಕೊಂಡು ಅದಕ್ಕೆ ಗೌರವ ಸಲ್ಲಿಸಿದರು. ಕ್ರಿಕೆಟ್‌ಗೆ ಸಂಬಂಧಿಸಿದ ಆಟಗಳು ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಐಸಿಸಿಯ ಉಡುಗೊರೆಗಳು ಮತ್ತು ಪೋಷಾಕುಗಳನ್ನು ನೀಡಲಾಯಿತು. ಈ ಕಾರ್ಯಕ್ರಮವು ಕೇವಲ ಜನರನ್ನು ಆಕರ್ಷಿಸುವುದಷ್ಟೇ ಅಲ್ಲದೆ, ಯುವಜನರಲ್ಲಿ ಕ್ರಿಕೆಟ್ ಬಗೆಗಿನ ಆಸಕ್ತಿಯನ್ನು ಹೆಚ್ಚಿಸಿದೆ.