
ದೇಹದ ಸಮತೋಲನ ಸಮಸ್ಯೆಗಳು ಮತ್ತು ವರ್ಟಿಗೊ (ತಲೆತಿರುಗುವಿಕೆ) ಎನ್ನುವುದು ಒಂದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆದರೆ, ಮಹಿಳೆಯರಲ್ಲಿ ಈ ಸಮಸ್ಯೆಗಳು ಹೆಚ್ಚು ಕಾಣಿಸಿಕೊಳ್ಳಲು ಹಲವು ಕಾರಣಗಳಿರಬಹುದು. ವಿಶೇಷವಾಗಿ, ಒಳ ಕಿವಿಯ ಸಮಸ್ಯೆಗಳು ಮತ್ತು ಹಾರ್ಮೋನ್‌ಗಳ ಏರುಪೇರು ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ವರ್ಟಿಗೊ ಮತ್ತು ದೇಹದ ಸಮತೋಲನ ಸಮಸ್ಯೆಗಳ ಲಕ್ಷಣಗಳು
ವರ್ಟಿಗೊ ಎಂದರೆ ತಾನೇ ಸುತ್ತುತ್ತಿರುವ ಅಥವಾ ಸುತ್ತಲಿನ ಪರಿಸರ ವೇಗವಾಗಿ ತಿರುಗುತ್ತಿರುವಂತಹ ಭ್ರಮೆ ಉಂಟಾಗುವುದು. ಇದು ಸಾಮಾನ್ಯವಾಗಿ ಒಳ ಕಿವಿಯ ಅಸಮತೋಲನದಿಂದ ಉಂಟಾಗುತ್ತದೆ. ಕೆಲವೊಮ್ಮೆ ದೇಹದ ಒಂದು ಬದಿಗೆ ವಾಲುವ, ಆಗಾಗ ಬೀಳುವ, ಅಥವಾ ಮೂರ್ಛೆ ಹೋಗುವಂತಹ ಸಮಸ್ಯೆಗಳಿದ್ದರೆ ಅದು ನರಶಾಸ್ತ್ರೀಯ ಸಮಸ್ಯೆಯ ಸೂಚನೆಯಾಗಿರಬಹುದು. ದೃಷ್ಟಿ ಮಂಜಾಗುವುದು ಅಥವಾ ಕುಸಿದು ಬೀಳುವಿಕೆಯು ಹೃದಯ ಸಂಬಂಧಿ ತೊಂದರೆಗಳ ಲಕ್ಷಣಗಳೂ ಆಗಿರಬಹುದು.
- ಒಳ ಕಿವಿಯ ಸಮಸ್ಯೆಗಳು: ಶ್ರವಣ ಶಕ್ತಿ ಕಡಿಮೆಯಾಗುವುದು ಮತ್ತು ಕಿವಿಯಲ್ಲಿ ಸದ್ದು ಕೇಳಿಸುವುದು (ಟಿನ್ನಿಟಸ್) ಇದ್ದರೆ, ಅದು ಒಳ ಕಿವಿಯ ಸಮಸ್ಯೆಯ ಸೂಚನೆಯಾಗಿದೆ. ವಾಕರಿಕೆ ಮತ್ತು ವಾಂತಿ ವರ್ಟಿಗೊದ ತೀವ್ರ ಸ್ವರೂಪವನ್ನು ಸೂಚಿಸುತ್ತವೆ.
ಮಹಿಳೆಯರಲ್ಲಿ ವರ್ಟಿಗೊ ಹೆಚ್ಚಾಗಿ ಕಾಣಿಸಲು ಕಾರಣ
ಮಹಿಳೆಯರ ದೇಹದಲ್ಲಿನ ಹಾರ್ಮೋನ್‌ಗಳು ವರ್ಟಿಗೊ ಸಮಸ್ಯೆಯ ಮೇಲೆ ಪ್ರಭಾವ ಬೀರುತ್ತವೆ. ಋತುಚಕ್ರದ ದಿನಗಳಲ್ಲಿ ಹಾರ್ಮೋನ್‌ಗಳ ಏರುಪೇರಿನಿಂದಾಗಿ ತಲೆತಿರುಗುವಿಕೆ ಹೆಚ್ಚಾಗಬಹುದು. ‘ಬಿನೀನ್ ಪ್ಯಾರೊಕ್ಸಿಮಲ್ ಪೊಸಿಶನಲ್ ವರ್ಟಿಗೊ (BPPV)’ ಎಂಬುದು ಇದರ ಸಾಮಾನ್ಯ ವಿಧವಾಗಿದ್ದು, ಇದು ತಲೆ ಅಥವಾ ದೇಹದ ಚಲನೆಯ ಸಮಯದಲ್ಲಿ ಉಂಟಾಗುತ್ತದೆ.
- ವೆಸ್ಟಿಬ್ಯುಲಾರ್ ಮೈಗ್ರೇನ್: ಋತುಚಕ್ರದ ದಿನಗಳಲ್ಲಿ ಕಾಣಿಸಿಕೊಳ್ಳುವ ಮೈಗ್ರೇನ್ ತಲೆನೋವು, ತಲೆ ಸಿಡಿಯುವಿಕೆ ಮತ್ತು ಬೆಳಕನ್ನು ಅಥವಾ ಸದ್ದನ್ನು ಸಹಿಸಲಾಗದಷ್ಟು ತೀಕ್ಷ್ಣವಾಗಿರುತ್ತದೆ. ಇದನ್ನು ‘ವೆಸ್ಟಿಬ್ಯುಲಾರ್ ಮೈಗ್ರೇನ್’ ಎಂದು ಕರೆಯಲಾಗುತ್ತದೆ. ಇದೂ ಕೂಡ ವರ್ಟಿಗೊ ಸಮಸ್ಯೆಗೆ ಸಂಬಂಧಿಸಿದೆ.
- ಓಟೊಸ್ಕ್ಲೆರೋಸಿಸ್: ಇದು ಮಧ್ಯ ಕಿವಿಯಲ್ಲಿರುವ ಪುಟ್ಟ ಮೂಳೆಯ ಕಾಯಿಲೆಯಾಗಿದ್ದು, ಸದ್ದನ್ನು ಒಳ ಕಿವಿಗೆ ರವಾನಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಈ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಇದು ಹೆಚ್ಚಾಗಬಹುದು, ಇದರಿಂದಾಗಿ ವರ್ಟಿಗೊ, ಟಿನ್ನಿಟಸ್ ಮತ್ತು ಶ್ರವಣ ಶಕ್ತಿ ನಷ್ಟ ಉಲ್ಬಣಿಸಬಹುದು.
- ಮೇನಿಯರ್ ಡಿಸೀಸ್: ಇದು ಒಳ ಕಿವಿಯಲ್ಲಿ ದ್ರವ ಹೆಚ್ಚಾಗಿ ತುಂಬಿಕೊಳ್ಳುವುದರಿಂದ ಉಂಟಾಗುವ ಕಾಯಿಲೆ. ಇದು ಕೆಲ ನಿಮಿಷಗಳಿಂದ ಹಲವು ಗಂಟೆಗಳವರೆಗೆ ತಲೆತಿರುಗುವಿಕೆ, ವಾಕರಿಕೆ, ಕಿವಿ ಮುಚ್ಚಿಕೊಂಡಂತಾಗುವುದು ಮತ್ತು ಟಿನ್ನಿಟಸ್‌ಗೆ ಕಾರಣವಾಗುತ್ತದೆ. ಈ ಸಮಸ್ಯೆಯೂ ಕೆಲ ಮಹಿಳೆಯರಲ್ಲಿ ಹಾರ್ಮೋನ್‌ಗಳ ಏರುಪೇರಿನಿಂದ ಪ್ರಭಾವಿತವಾಗಬಹುದು.
ಚಿಕಿತ್ಸೆ ಮತ್ತು ಪರಿಹಾರ
ವರ್ಟಿಗೊ ಮತ್ತು ಸಮತೋಲನ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರು ತಕ್ಷಣ ಇಎನ್‌ಟಿ (ENT) ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಸಮಸ್ಯೆಯ ನಿಖರ ಕಾರಣವನ್ನು ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ರೋಗಲಕ್ಷಣಗಳನ್ನು ನಿಯಂತ್ರಿಸಬಹುದು. ಇದು ದೈಹಿಕ ಸಮಸ್ಯೆಯಲ್ಲದೆ ಮಾನಸಿಕ ಒತ್ತಡ ಮತ್ತು ಭಯವನ್ನು ನಿವಾರಿಸಲೂ ಸಹಕಾರಿ.