
ಇಂದಿನ ವೇಗದ ಜೀವನಶೈಲಿಯಲ್ಲಿ, ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ತರಾತುರಿಯಲ್ಲಿ ಎದ್ದು ಓಡುವುದು ಸಾಮಾನ್ಯವಾಗಿದೆ. ಆದರೆ, ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದರಿಂದ ಆರೋಗ್ಯದ ಜೊತೆಗೆ ಹಲವು ಅದ್ಭುತ ಪ್ರಯೋಜನಗಳಿವೆ. ಈ ಸರಳ ಅಭ್ಯಾಸವು ನಿಮ್ಮ ಜೀವನದ ಗುಣಮಟ್ಟವನ್ನೇ ಸುಧಾರಿಸುತ್ತದೆ.
ಉತ್ತಮ ನಿದ್ರೆಯ ಗುಣಮಟ್ಟ
ಬೆಳಗ್ಗೆ ಬೇಗ ಏಳುವ ಅಭ್ಯಾಸ ನಿಮ್ಮ ದೇಹದ ನೈಸರ್ಗಿಕ ಲಯವನ್ನು (ಸಿರ್ಕಾಡಿಯನ್ ರಿದಮ್) ಸಕ್ರಿಯಗೊಳಿಸುತ್ತದೆ. ಇದು ನಿಮಗೆ ರಾತ್ರಿಯಲ್ಲಿ ಸರಿಯಾದ ಸಮಯಕ್ಕೆ ನಿದ್ದೆ ಬರುವಂತೆ ಮಾಡುತ್ತದೆ. ಇದರಿಂದ ನಿಮ್ಮ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ ಮತ್ತು ದೀರ್ಘಕಾಲದ ನಿದ್ರಾಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ.
ಒತ್ತಡ ಮತ್ತು ಆತಂಕ ನಿವಾರಣೆ
ಮುಂಜಾನೆ ಬೇಗ ಏಳುವುದರಿಂದ ನಿಮಗೆ ದಿನವನ್ನು ಆರಂಭಿಸಲು ಸಾಕಷ್ಟು ಸಮಯ ಸಿಗುತ್ತದೆ. ಇದು ಒತ್ತಡವನ್ನುಂಟು ಮಾಡುವ ಕಾರ್ಟಿಸೋಲ್
ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಂಜಾನೆಯ ಶಾಂತ ವಾತಾವರಣದಲ್ಲಿ ಧ್ಯಾನ ಅಥವಾ ಯೋಗದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಹೆಚ್ಚುತ್ತದೆ ಮತ್ತು ಆತಂಕ ಕಡಿಮೆಯಾಗುತ್ತದೆ.
ವ್ಯಾಯಾಮಕ್ಕೆ ಹೆಚ್ಚು ಸಮಯ
ಬೆಳಗ್ಗೆ ಬೇಗನೆ ಏಳುವುದರಿಂದ ವ್ಯಾಯಾಮ ಮಾಡಲು ಹೆಚ್ಚಿನ ಸಮಯ ದೊರೆಯುತ್ತದೆ. ದೈನಂದಿನ ಜಂಜಾಟದ ಮಧ್ಯೆ ವ್ಯಾಯಾಮಕ್ಕೆ ಸಮಯ ಸಿಗದೇ ಇರುವವರಿಗೆ ಇದು ಉತ್ತಮ ಪರಿಹಾರ. ಸಮೀಪದ ಉದ್ಯಾನವನದಲ್ಲಿ ವಾಕಿಂಗ್ ಅಥವಾ ಜಾಗಿಂಗ್ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ.
ಆರೋಗ್ಯಕರ ಚರ್ಮ ಮತ್ತು ಕಣ್ಣುಗಳು
ದೀರ್ಘ ಮತ್ತು ಗುಣಮಟ್ಟದ ನಿದ್ರೆಯ ನಂತರ ಬೆಳಗ್ಗೆ ಬೇಗ ಏಳುವ ಅಭ್ಯಾಸ ಚರ್ಮದ ಆರೋಗ್ಯಕ್ಕೂ ಉತ್ತಮ. ಇದು ಕಣ್ಣಿನ ಸುತ್ತಲಿನ ಕಪ್ಪು ಕಲೆಗಳು ಮತ್ತು ಮುಖದ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಂಜಾನೆಯ ಸೂರ್ಯನ ಕಿರಣಗಳು ವಿಟಮಿನ್ ಡಿ ಒದಗಿಸುವುದರಿಂದ ಚರ್ಮದ ಕಾಂತಿಗೂ ಇದು ಒಳ್ಳೆಯದು.