
ಸಾಮಾನ್ಯವಾಗಿ ಒಗ್ಗರಣೆ ಅಥವಾ ಚಟ್ನಿ ರೂಪದಲ್ಲಿ ಕಡಲೆ ಬೀಜಗಳನ್ನು (ನೆಲಗಡಲೆ/ಕಡಲೆಕಾಯಿ) ಸೇವಿಸುವುದು ರೂಢಿ. ಆದರೆ ಕಡಲೆ ಬೀಜಗಳನ್ನು ನೆನೆಸಿಟ್ಟು ತಿನ್ನುವುದರಿಂದ ವಿಶಿಷ್ಟ ಮತ್ತು ಹೆಚ್ಚಿನ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕಡಲೆ ಬೀಜಗಳಲ್ಲಿ ವಿಟಮಿನ್ ಬಿ1, ಬಿ2, ಬಿ6, ನಯಾಸಿನ್, ಫೋಲೆಟ್, ಪೊಟ್ಯಾಶಿಯಂ, ಪ್ರೋಟೀನ್, ನಾರಿನಂಶ, ಹಾಗೂ ಹೃದಯಕ್ಕೆ ಸಹಕಾರಿಯಾದ ಒಳ್ಳೆಯ ಕೊಬ್ಬಿನ ಅಂಶಗಳು ಸಮೃದ್ಧವಾಗಿವೆ.

ನೆನೆಸಿದ ಕಡಲೆ ಬೀಜ ಸೇವನೆಯ ಪ್ರಮುಖ ಆರೋಗ್ಯ ಲಾಭಗಳು:
- ದೇಹದಲ್ಲಿ ರಕ್ತ ಸಂಚಾರ ಹೆಚ್ಚಳ: ನೆನೆಸಿದ ಕಡಲೆ ಬೀಜಗಳು ಹೃದಯ ರಕ್ತನಾಳಗಳನ್ನು ಆರೋಗ್ಯಕರವಾಗಿ ಕಾಪಾಡುತ್ತವೆ. ಅವು ರಕ್ತನಾಳಗಳಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಗುಣ ಹೊಂದಿದ್ದು, ಇಡೀ ದೇಹದ ತುಂಬಾ ಅತ್ಯುತ್ತಮ ಪ್ರಮಾಣದ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತವೆ.
- ಸೊಂಟ ನೋವಿಗೆ ಪರಿಹಾರ: ಹಿರಿಯರು ಬೆಲ್ಲ ಮತ್ತು ನೆನೆಸಿದ ಕಡಲೆ ಬೀಜಗಳನ್ನು ತಿಂದು ಸೊಂಟ ನೋವು ನಿವಾರಣೆ ಮಾಡಿಕೊಳ್ಳುತ್ತಿದ್ದರು. ಈ ಮನೆಮದ್ದು ರಾಸಾಯನಿಕಯುಕ್ತ ಔಷಧಿಗಳಿಗಿಂತ ಪರಿಣಾಮಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
- ಕ್ಯಾನ್ಸರ್ ಸಮಸ್ಯೆ ಅಪಾಯ ಕಡಿಮೆ: ಸಂಶೋಧಕರು ಹೇಳುವಂತೆ, ವಾರದಲ್ಲಿ ಕನಿಷ್ಠ ಮೂರು ಬಾರಿ ನೆನೆಸಿದ ಕಡಲೆ ಬೀಜಗಳನ್ನು ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್‌ನಂತಹ ಮಾರಕ ಕ್ಯಾನ್ಸರ್ ಸಮಸ್ಯೆಗಳು ಅಭಿವೃದ್ಧಿಯಾಗುವ ಸಾಧ್ಯತೆ ಶೇಕಡಾ 58% ರಷ್ಟು ಕಡಿಮೆಯಾಗುತ್ತದೆ.
- ದೇಹದ ತೂಕ ಇಳಿಕೆಗೆ ಸಹಕಾರಿ: ಪ್ರೊಟೀನ್, ಕೊಬ್ಬು ಮತ್ತು ನಾರಿನ ಅಂಶ ಸಮೃದ್ಧವಾಗಿರುವುದರಿಂದ, ನೆನೆಸಿದ ಕಡಲೆ ಬೀಜಗಳು ಮೆಟಬೋಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುತ್ತವೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ಹಸಿವು ಉಂಟಾಗದಂತೆ ನೋಡಿಕೊಳ್ಳುತ್ತವೆ. ವ್ಯಾಯಾಮದ ಮುಂಚೆ ಇವುಗಳನ್ನು ಸೇವಿಸುವುದರಿಂದ ಶಕ್ತಿ ಮತ್ತು ಚೈತನ್ಯವನ್ನು ಉಳಿಸಿಕೊಳ್ಳಬಹುದು.
- ಜೀರ್ಣ ಶಕ್ತಿ ಹೆಚ್ಚಳ: ಕಡಲೆ ಬೀಜಗಳಲ್ಲಿ ನಾರಿನ ಅಂಶದ ಪ್ರಮಾಣ ಹೆಚ್ಚಾಗಿರುವುದರಿಂದ, ಅವು ಕರುಳಿನ ಭಾಗದ ಉತ್ತಮ ಚಲನೆಗೆ ಅನುಕೂಲವಾಗುತ್ತವೆ. ಇರಿಟೇಬಲ್ ಬೋವಲ್ ಸಿಂಡ್ರೋಮ್ ಮತ್ತು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಸುಲಭ ಪರಿಹಾರ ನೀಡುತ್ತದೆ. ಪ್ರತಿದಿನ ಆರು ಅಥವಾ ಏಳು ಕಡಲೆ ಬೀಜಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದು ಒಳ್ಳೆಯದು.



































