
ಮಾರಕ ರೋಗ ಕ್ಯಾನ್ಸರ್‌ಗೆ ಔಷಧ ಇಲ್ಲ ಎಂಬ ನಂಬಿಕೆಯನ್ನು ಹುಸಿಗೊಳಿಸುವಂತೆ, ರಷ್ಯಾದ ವಿಜ್ಞಾನಿಗಳು ಎಆರ್‌ಎನ್‌ಎ ಆಧಾರಿತ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಲಸಿಕೆ ಪ್ರೀಕ್ಲಿನಿಕಲ್ ಪ್ರಯೋಗಗಳಲ್ಲಿ ಶೇ.100ರಷ್ಟು ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಸಾಬೀತಾಗಿದೆ. ಈ ಲಸಿಕೆಗೆ ಸರ್ಕಾರದಿಂದ ಅನುಮೋದನೆ ದೊರೆತರೆ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದು ಜಗತ್ತಿನ ಮೊದಲ ಲಸಿಕೆ ಎಂಬ ಇತಿಹಾಸ ಸೃಷ್ಟಿಸಲಿದೆ.
ರಷ್ಯಾದ ಫೆಡರಲ್ ಮೆಡಿಕಲ್ ಅಂಡ್ ಬಯೋಲಾಜಿಕಲ್ ಏಜೆನ್ಸಿ (ಎಫ್‌ಎಂಬಿಎ) ಈ ನೂತನ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ ‘ಎಂಟರೋಮಿಕ್ಸ್’ ಎಂದು ಹೆಸರಿಡಲಾಗಿದೆ. ಪೂರ್ವ ಕ್ಲಿನಿಕಲ್ ಪ್ರಯೋಗಗಳ ಸಂದರ್ಭದಲ್ಲಿ ಈ ಲಸಿಕೆಯನ್ನು ಕ್ಯಾನ್ಸರ್ ಟ್ಯೂಮರ್‌ಗಳನ್ನು ಹೊಂದಿರುವ ರೋಗಿಗಳ ಮೇಲೆ ಪ್ರಯೋಗಿಸಲಾಗಿತ್ತು. ಈ ಪ್ರಯೋಗಗಳಲ್ಲಿ, ಲಸಿಕೆಯು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಲ್ಲಿ ಮತ್ತು ಟ್ಯೂಮರ್‌ಗಳ ಗಾತ್ರವನ್ನು ಗಮನಾರ್ಹವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಎಫ್‌ಎಂಬಿಎ ತಿಳಿಸಿದೆ.
ಏಜೆನ್ಸಿಯ ಮುಖ್ಯಸ್ಥೆ ವೆರೋನಿಕಾ ಸ್ಕೊವತ್ಸೋವಾ ಈ ಕುರಿತು ಮಾತನಾಡಿ, “ಸುಮಾರು ಮೂರು ವರ್ಷಗಳ ಪ್ರೀಕ್ಲಿನಿಕಲ್ ಪ್ರಯೋಗಗಳು ಸೇರಿದಂತೆ ಹಲವು ವರ್ಷಗಳ ಸಂಶೋಧನೆಯ ಫಲವಾಗಿ ಈ ಲಸಿಕೆ ರೂಪುಗೊಂಡಿದೆ. ಕ್ಲಿನಿಕಲ್ ಪ್ರಯೋಗಗಳಲ್ಲಿ ಪದೇ ಪದೇ ಡೋಸ್ ನೀಡಿದಾಗಲೂ ಇದು ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಎಂದು ದೃಢಪಟ್ಟಿದೆ. ಕೆಲವು ರೋಗಿಗಳಲ್ಲಿ ಕ್ಯಾನ್ಸರ್ ಗೆಡ್ಡೆಯ ಬೆಳವಣಿಗೆ ಶೇ.60ರಿಂದ ಶೇ.80ರಷ್ಟು ನಿಧಾನಗೊಂಡಿರುವುದು ಕಂಡುಬಂದಿದೆ. ಈ ಯಶಸ್ಸು ಕ್ಯಾನ್ಸರ್ ಪ್ರಕಾರದಿಂದ ಕ್ಯಾನ್ಸರ್ ಪ್ರಕಾರಕ್ಕೆ ಬದಲಾಗುತ್ತದೆ” ಎಂದು ಹೇಳಿದ್ದಾರೆ.
ಇದೇ ಏಜೆನ್ಸಿಯು ಮೂರು ವರ್ಷಗಳ ಹಿಂದೆ ಕೊರೊನಾವೈರಸ್ ವಿರುದ್ಧವೂ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ತೊಡಗಿತ್ತು. ಆದರೆ, ಪ್ರಸ್ತುತ ಅಭಿವೃದ್ಧಿಪಡಿಸಲಾಗಿರುವ ಕ್ಯಾನ್ಸರ್ ಲಸಿಕೆಗೆ ರಷ್ಯಾ ಸರ್ಕಾರ ಇನ್ನಷ್ಟೇ ಅಧಿಕೃತ ಅನುಮೋದನೆ ನೀಡಬೇಕಿದೆ. ಅನುಮೋದನೆ ಸಿಕ್ಕ ತಕ್ಷಣ, ಮನುಷ್ಯರ ಮೇಲೆ ಈ ಲಸಿಕೆಯ ಪ್ರಾಯೋಗಿಕ ಬಳಕೆ ಆರಂಭವಾಗಲಿದೆ. ಈ ಬೆಳವಣಿಗೆಯಿಂದಾಗಿ, ಕ್ಯಾನ್ಸರ್ ರೋಗಿಗಳಲ್ಲಿ ಹೊಸ ಭರವಸೆ ಮೂಡಿದೆ.
ಈ ಸಂಶೋಧನೆಯು ಕ್ಯಾನ್ಸರ್‌ಗೆ ಚಿಕಿತ್ಸೆ ಮಾತ್ರವಲ್ಲದೆ, ಭವಿಷ್ಯದಲ್ಲಿ ಅದನ್ನು ತಡೆಗಟ್ಟುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸಬಹುದು ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಗತ್ತಿನಾದ್ಯಂತ ಸಂಶೋಧಕರು ಕ್ಯಾನ್ಸರ್ ಚಿಕಿತ್ಸೆಗಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದರೂ, ರಷ್ಯಾದ ಈ ಯಶಸ್ಸು ಒಂದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಈ ಲಸಿಕೆಯ ಯಶಸ್ವಿ ಪ್ರಯೋಗಗಳು ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಪಷ್ಟವಾಗಲಿವೆ.