
ಪೋಷಕರು ತಮ್ಮ ಮಕ್ಕಳ ಮೇಲಿನ ಅತೀವ ಪ್ರೀತಿಯನ್ನು ವ್ಯಕ್ತಪಡಿಸಲು ಮುತ್ತು ನೀಡುವುದು ಸಹಜ. ಆದರೆ, ಈ ಮುದ್ದಾಟವು ಹಸುಗೂಸುಗಳ ಪಾಲಿಗೆ ಮಾರಕವಾಗುವ ಸಾಧ್ಯತೆಯಿದೆ ಎಂದು ವೈದ್ಯಕೀಯ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಅಜಾಗರೂಕತೆಯಿಂದ ನೀಡುವ ಮುತ್ತುಗಳು ಕಂದಮ್ಮಗಳ ಜೀವನವನ್ನೇ ಅಪಾಯಕ್ಕೆ ದೂಡಬಹುದು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.
ನವಜಾತ ಶಿಶುಗಳ ರೋಗನಿರೋಧಕ ಶಕ್ತಿಯು (Immunity) ಆರಂಭಿಕ ಹಂತದಲ್ಲಿ ಬಹಳ ದುರ್ಬಲವಾಗಿರುತ್ತದೆ. ವಯಸ್ಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಜ್ವರ, ಶೀತ ಅಥವಾ ಹರ್ಪೀಸ್‌ನಂತಹ ಸೋಂಕುಗಳು ಮುತ್ತಿನ ಮೂಲಕ ಸುಲಭವಾಗಿ ಶಿಶುಗಳಿಗೆ ವರ್ಗಾವಣೆಯಾಗುತ್ತವೆ. ವಿಶೇಷವಾಗಿ ‘ಹರ್ಪೀಸ್ ಸಿಂಪ್ಲೆಕ್ಸ್’ ವೈರಸ್ (ಕೋಲ್ಡ್ ಸೋರ್) ಮುತ್ತಿನ ಮೂಲಕ ಹರಡಿದರೆ, ಅದು ಮಗುವಿನಲ್ಲಿ ತೀವ್ರ ಜ್ವರ, ಚರ್ಮದ ದದ್ದುಗಳು ಹಾಗೂ ಮೆದುಳಿನ ಸೋಂಕಿನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಪೋಷಕರಿಗೆ ಯಾವುದೇ ಕಾಯಿಲೆಯ ಲಕ್ಷಣಗಳು ಕಾಣಿಸದಿದ್ದರೂ ಸಹ, ಅವರಲ್ಲಿರುವ ವೈರಸ್‌ಗಳು ಮಗುವಿನ ಮೇಲೆ ತೀವ್ರ ಪರಿಣಾಮ ಬೀರಬಹುದು. ಆದ್ದರಿಂದ, ಅನಾರೋಗ್ಯವಿದ್ದಾಗ ಅಥವಾ ಹೊರಗಿನಿಂದ ಬಂದ ತಕ್ಷಣ ಮಗುವನ್ನು ಮುದ್ದಾಡುವುದನ್ನು ತಪ್ಪಿಸುವುದು ಮತ್ತು ನೈರ್ಮಲ್ಯ ಕಾಪಾಡುವುದು ಕಡ್ಡಾಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.



































