
ಅತಿಯಾಗಿ ಯೋಚಿಸುವುದು ಮೇಲ್ನೋಟಕ್ಕೆ ಹಾನಿಕರವಲ್ಲ ಎನಿಸಿದರೂ, ಅದು ನಿಧಾನವಾಗಿ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಇದು ನಿಮ್ಮನ್ನು ಭಾವನಾತ್ಮಕವಾಗಿ ಸಿಲುಕಿಸಿ, ಸಮಸ್ಯೆ ಪರಿಹಾರಕ್ಕೆ ಅಡ್ಡಿಯಾಗಿ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಮುಂಬೈನ ಸೈಫೀ ಆಸ್ಪತ್ರೆಯ ಮನಶ್ಯಾಸ್ತ್ರಜ್ಞ ಭವ್ಯಾ ಶಾ ಎಚ್ಚರಿಸಿದ್ದಾರೆ. ಅತಿಯಾದ ಚಿಂತೆಯು ನಿಮ್ಮ ನಿದ್ರೆ, ಗಮನ ಮತ್ತು ಸಂಬಂಧಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ, ಮನಸ್ಸನ್ನು ದಣಿಸಿ ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಅತಿಯಾದ ಯೋಚನೆಯ ಪರಿಣಾಮಗಳು
ತಜ್ಞರ ಪ್ರಕಾರ, ಅತಿಯಾದ ಯೋಚನೆಯು ಮಾನಸಿಕ ಅಡಚಣೆಗಳನ್ನು ಸೃಷ್ಟಿಸುತ್ತದೆ. ಒಂದೇ ವಿಷಯದ ಬಗ್ಗೆ ಹೆಚ್ಚು ಕಾಲ ಯೋಚಿಸಿದಾಗ, ಮೆದುಳು ಅದೇ ಆಲೋಚನೆಗಳಲ್ಲಿ ಸಿಲುಕಿಕೊಳ್ಳುತ್ತದೆ, ಹೊಸ ಆಲೋಚನೆಗಳಿಗೆ ಅವಕಾಶ ನೀಡುವುದಿಲ್ಲ. ಇದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಅವಕಾಶಗಳನ್ನು ದೂರ ಮಾಡುತ್ತದೆ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
ಕೆಲವರು ತಮ್ಮ ಹಿಂದಿನ ತಪ್ಪುಗಳು, ವಿಷಾದಗಳು ಅಥವಾ ನಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಚಿಂತಿಸಿದರೆ, ಇನ್ನು ಕೆಲವರು ಭವಿಷ್ಯದ ಬಗ್ಗೆ ಯೋಚಿಸಿ ಭಯಭೀತರಾಗುತ್ತಾರೆ. ನಮ್ಮ ಆಲೋಚನೆಗಳು ಕ್ರಿಯೆ ಮತ್ತು ಶಾಂತಿಗೆ ಪೂರಕವಾಗಿರಬೇಕೇ ಹೊರತು, ಮಾನಸಿಕ ಅಸ್ವಸ್ಥತೆ ಉಂಟು ಮಾಡುವಂತಿರಬಾರದು ಎಂದು ಭವ್ಯಾ ಶಾ ತಿಳಿಸಿದ್ದಾರೆ.
ಅತಿಯಾದ ಯೋಚನೆಯನ್ನು ಕಡಿಮೆ ಮಾಡಲು ಸಲಹೆಗಳು:
ಮನಸ್ಸನ್ನು ಹಗುರಗೊಳಿಸಲು ಮತ್ತು ಅತಿಯಾದ ಯೋಚನೆಗಳನ್ನು ಕಡಿಮೆಗೊಳಿಸಲು ಭವ್ಯಾ ಶಾ ಕೆಲವು ಸರಳ ಸಲಹೆಗಳನ್ನು ಹಂಚಿಕೊಂಡಿದ್ದಾರೆ:
- ಮೆದುಳಿನಿಂದ ಎಲ್ಲವನ್ನೂ ಹೊರಹಾಕಿ: ನಿಮ್ಮ ಮನಸ್ಸಿನಲ್ಲಿರುವ ಆಲೋಚನೆಗಳನ್ನು ಒಂದು ಪೇಪರ್‌ನಲ್ಲಿ ಬರೆಯಿರಿ. ಇದು ಆಲೋಚನೆಗಳನ್ನು ಮೆದುಳಿನಿಂದ ಹೊರಹಾಕಿದಂತೆ ಭಾಸವಾಗುತ್ತದೆ.
- ಚಿಂತಿಸಲು ಸಮಯ ನಿಗದಿಪಡಿಸಿ: ಯಾವುದೇ ಒಂದು ವಿಷಯದ ಬಗ್ಗೆ ಚಿಂತಿಸಲು ದಿನಕ್ಕೆ 15-20 ನಿಮಿಷಗಳ ಕಾಲಾವಕಾಶ ನೀಡಿ. ಆ ಸಮಯದ ಬಳಿಕ ನಿಮ್ಮ ಮನಸ್ಸನ್ನು ಬೇರೆಡೆಗೆ ಬದಲಾಯಿಸಿ. ಇದು ಅತಿಯಾದ ಯೋಚನೆಯನ್ನು ನಿಯಂತ್ರಿಸಲು ಸಹಕಾರಿ.
- ಇಂದ್ರಿಯಗಳ ಬಳಕೆ: ಸಂಗೀತ ಆಲಿಸಿ, ವಾಕ್ ಮಾಡಿ, ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ನಿಮ್ಮ ದೇಹದ ಅಗತ್ಯತೆಗಳ ಕಡೆಗೆ ಗಮನ ಹರಿಸುವುದು ಅತಿಯಾದ ಚಿಂತೆಗೆ ಬ್ರೇಕ್ ಹಾಕಲು ಸಹಾಯ ಮಾಡುತ್ತದೆ.
- ಮಾತನಾಡಿ: ನಿಮ್ಮ ಸ್ನೇಹಿತರು, ಕುಟುಂಬದವರು ಅಥವಾ ನಂಬಿಕಸ್ಥ ಚಿಕಿತ್ಸಕರೊಂದಿಗೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ಕೆಲವೊಮ್ಮೆ ಮನಸ್ಸಿನಲ್ಲಿರುವುದನ್ನು ಹೊರಹಾಕುವುದು ಸ್ಪಷ್ಟತೆಯನ್ನು ನೀಡುತ್ತದೆ ಮತ್ತು ಚಿಂತೆಯನ್ನು ಕಡಿಮೆ ಮಾಡುತ್ತದೆ.