
ಓಂಕಾಳು ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದ್ದರೂ, ಇದರ ಸೇವನೆಯಿಂದ ಹತ್ತು ಹಲವು ಆರೋಗ್ಯ ಪ್ರಯೋಜನಗಳಿವೆ. ಅನೇಕ ಜನರು ಹೊಟ್ಟೆ, ಕರುಳು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಹುಣ್ಣುಗಳಿಂದ ಬಳಲುತ್ತಿರುತ್ತಾರೆ. ಇಂತಹ ಹುಣ್ಣುಗಳನ್ನು ಗುಣಪಡಿಸಲು ಓಂಕಾಳುಗಳು ಪರಿಣಾಮಕಾರಿ ಎಂಬುದು ಆಶ್ಚರ್ಯಕರ.
ಓಂಕಾಳಿನ ಪ್ರಮುಖ ಆರೋಗ್ಯ ಪ್ರಯೋಜನಗಳು:
- ಜೀರ್ಣಕ್ರಿಯೆಗೆ ಪರಿಹಾರ: ಓಂಕಾಳುಗಳು ಅಸಿಡಿಟಿ, ಗ್ಯಾಸ್ ಸಮಸ್ಯೆ, ಮತ್ತು ಜೀರ್ಣಕ್ರಿಯೆಯ ವಿಳಂಬ ತೊಂದರೆಗಳನ್ನು ಸರಿಪಡಿಸುತ್ತವೆ. ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಅರ್ಧ ಚಮಚ ಓಂಕಾಳುಗಳನ್ನು ಜಗಿದು ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು. ಇದು ಹೊಟ್ಟೆಯ ತಳಮಳ ಮತ್ತು ನೋವನ್ನು ನಿವಾರಿಸುತ್ತದೆ.
- ಪ್ರತಿಜೀವಕ ಗುಣ: ಓಂಕಾಳುಗಳು ‘ತೈವನ್’ (Thymol) ಎಂಬ ಅಂಶವನ್ನು ಒಳಗೊಂಡಿದ್ದು, ಇದು ಕೀಟಾಣುಗಳು ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ.
- ಚರ್ಮ ಸಮಸ್ಯೆಗಳಿಗೆ: ಶಿಲೀಂಧ್ರದಿಂದ ಉಂಟಾಗುವ ಚರ್ಮ ಸಮಸ್ಯೆಗಳಿಗೆ ಓಂಕಾಳುಗಳನ್ನು ಕುಟ್ಟಿ ಪುಡಿ ಮಾಡಿ ನೇರವಾಗಿ ಹಚ್ಚಬಹುದು. ಮೊಡವೆಗಳು ಅಥವಾ ಕಲೆಗಳ ಬಣ್ಣ ಕಡಿಮೆ ಮಾಡಲು ಓಂಕಾಳು ಪುಡಿಯನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ ಹಚ್ಚಿ 15 ನಿಮಿಷದ ನಂತರ ತೊಳೆಯಬಹುದು.
- ಮಹಿಳೆಯರ ಆರೋಗ್ಯ: ಓಂಕಾಳುಗಳನ್ನು ಪುಡಿ ಮಾಡಿ ನೀರಿನೊಂದಿಗೆ ಸೇವಿಸುವುದರಿಂದ ಗರ್ಭಿಣಿ ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳು ಮತ್ತು ಸಾಮಾನ್ಯ ಮಹಿಳೆಯರಲ್ಲಿ ಉಂಟಾಗುವ ಋತುಚಕ್ರದ ಏರುಪೇರುಗಳನ್ನು ಸರಿಪಡಿಸಿಕೊಳ್ಳಬಹುದು. ಸ್ವಲ್ಪ ಹುರಿದ ಓಂಕಾಳುಗಳನ್ನು ನೀರಿಗೆ ಹಾಕಿ ಕುದಿಸಿ, ಆ ನೀರನ್ನು ಸೋಸಿ ಕುಡಿಯಬಹುದು. ಗರ್ಭಾವಸ್ಥೆಯಲ್ಲಿ ಓಂಕಾಳು ಸೇವನೆಯು ರಕ್ತವನ್ನು ಶುದ್ಧೀಕರಿಸಿ, ದೇಹದಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.
- ತೂಕ ನಿರ್ವಹಣೆ: ಓಂಕಾಳುಗಳಲ್ಲಿ ಹೆಚ್ಚಿನ ನಾರಿನಂಶ (ಫೈಬರ್) ಇರುವುದರಿಂದ, ದೇಹದಲ್ಲಿ ಅನಗತ್ಯವಾಗಿ ಶೇಖರಣೆಯಾಗಿರುವ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಆರ್ಥ್ರೈಟಿಸ್ ನೋವು ನಿವಾರಣೆ: ಓಂಕಾಳುಗಳಲ್ಲಿ ಉರಿಯೂತಗಳನ್ನು ಶಮನ ಮಾಡುವ ಗುಣಗಳು ಇವೆ. ಇದು ಆರ್ಥ್ರೈಟಿಸ್‌ನಿಂದ ಉಂಟಾದ ಮೂಳೆಗಳ ಬಳಿ ಇರುವ ಕೆಂಪು ಕಲೆಗಳು ಮತ್ತು ನೋವನ್ನು ಹೋಗಲಾಡಿಸಲು, ಹಾಗೂ ಮೂಳೆಗಳ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಬಾಯಿ ದುರ್ವಾಸನೆ ನಿವಾರಣೆ: ಓಂಕಾಳುಗಳನ್ನು ನಿಂಬೆ ರಸದಲ್ಲಿ ನೆನೆಸಿ, ಕಪ್ಪು ಉಪ್ಪನ್ನು ಬೆರೆಸಿ ಸೂರ್ಯನ ಕಿರಣಗಳಲ್ಲಿ ಒಣಗಿಸಿದಾಗ, ನಂತರದ ದಿನಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಇವುಗಳನ್ನು ಬಳಸಿಕೊಳ್ಳಬಹುದು.
- ಬಿಳಿ ಕೂದಲು ಮತ್ತು ಕೂದಲು ಉದುರುವಿಕೆ: ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಮತ್ತು ಕೂದಲು ಉದುರುವ ಸಮಸ್ಯೆಗಳಿಗೆ ಓಂಕಾಳುಗಳನ್ನು ಬಳಸಿಕೊಳ್ಳಬಹುದು. ಎರಡು ಚಮಚ ಓಂಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆಸಿ, ಬೆಳಿಗ್ಗೆ ನೀರನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

ಓಂಕಾಳುಗಳು ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತವೆ. ಇದನ್ನು ದಾಲ್, ಕರಿ ಅಥವಾ ಸಾಂಬಾರ್‌ಗಳಲ್ಲಿ ಪುಡಿಯಾಗಿ ಬಳಸಬಹುದು. ಅಜೀರ್ಣ ಸಮಸ್ಯೆ ನಿವಾರಿಸಲು ಜೀರಿಗೆ ಬದಲು ಓಂಕಾಳು ಬಳಸಬಹುದು. ಇದನ್ನು ಮೌತ್ ಫ್ರೆಶ್‌ನರ್ ಆಗಿಯೂ ಬಳಸಬಹುದು.