
ಆರೋಗ್ಯಕರ ಜೀವನಶೈಲಿಗೆ ಉತ್ತಮ ನಿದ್ದೆ ಎಷ್ಟು ಮುಖ್ಯ ಎಂಬುದು ವೈದ್ಯಕೀಯ ವಿಜ್ಞಾನದಿಂದ ದೃಢಪಟ್ಟಿದೆ. ಸಾಕಷ್ಟು ನಿದ್ದೆ ಮಾಡುವುದರಿಂದ ಒತ್ತಡ ಮತ್ತು ಖಿನ್ನತೆ ದೂರವಾಗುವುದಲ್ಲದೆ, ಮೆದುಳಿನ ಕಾರ್ಯಕ್ಷಮತೆಯೂ ಸುಧಾರಿಸುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ (NSF) ಪ್ರಕಾರ, ಪ್ರತಿ ವಯಸ್ಸಿನವರಿಗೂ ನಿರ್ದಿಷ್ಟ ಪ್ರಮಾಣದ ನಿದ್ದೆ ಅಗತ್ಯ.
ನಿಮ್ಮ ವಯಸ್ಸಿಗೆ ಅನುಗುಣವಾಗಿ ಎಷ್ಟು ಗಂಟೆಗಳ ನಿದ್ದೆ ಅಗತ್ಯ ಎಂದು ಇಲ್ಲಿ ವಿವರಿಸಲಾಗಿದೆ:
- ನವಜಾತ ಶಿಶುಗಳು (0-3 ತಿಂಗಳು): ವೈದ್ಯಕೀಯ ತಜ್ಞರ ಪ್ರಕಾರ, ನವಜಾತ ಶಿಶುಗಳಿಗೆ ದಿನಕ್ಕೆ 14-17 ಗಂಟೆಗಳ ನಿದ್ದೆ ಅತ್ಯಗತ್ಯ.
- ಮಕ್ಕಳು (3-5 ವರ್ಷ): ಈ ವಯಸ್ಸಿನ ಮಕ್ಕಳಿಗೆ 10-13 ಗಂಟೆಗಳ ನಿದ್ರೆ ಸಾಕಾಗುತ್ತದೆ.
- ಶಾಲಾ ಮಕ್ಕಳು (6-13 ವರ್ಷ): ಶಾಲಾ ಮಕ್ಕಳು 9-11 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದು ಅವರ ಮಾನಸಿಕ ಬೆಳವಣಿಗೆಗೆ ಸಹಾಯಕ.
- ಹದಿಹರೆಯದವರು (14-17 ವರ್ಷ): ಈ ವಯಸ್ಸಿನವರು 8-10 ಗಂಟೆಗಳ ನಿದ್ದೆ ಮಾಡಬೇಕು. 7 ಗಂಟೆಗಿಂತ ಕಡಿಮೆ ಅಥವಾ 11 ಗಂಟೆಗಿಂತ ಹೆಚ್ಚು ನಿದ್ದೆ ಅವರಿಗೆ ಸೂಕ್ತವಲ್ಲ.
- ವಯಸ್ಕರು (18-64 ವರ್ಷ): ವಯಸ್ಕರು ಪ್ರತಿದಿನ ಕನಿಷ್ಠ 7-9 ಗಂಟೆಗಳ ಕಾಲ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. 6 ಗಂಟೆಗಿಂತ ಕಡಿಮೆ ಮತ್ತು 11 ಗಂಟೆಗಿಂತ ಹೆಚ್ಚು ನಿದ್ದೆ ಮಾಡುವುದನ್ನು ತಪ್ಪಿಸಬೇಕು.
- ಹಿರಿಯರು (65 ವರ್ಷ ಮೇಲ್ಪಟ್ಟವರು): 65 ವರ್ಷ ಮೇಲ್ಪಟ್ಟವರು 7-8 ಗಂಟೆಗಳ ನಿದ್ದೆ ಮಾಡಬೇಕು. ಇದು ಅವರ ಮಾನಸಿಕ ಸ್ಥಿತಿ ಮತ್ತು ಮೆದುಳಿನ ಕಾರ್ಯನಿರ್ವಹಣೆಯನ್ನು ಸುಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.
ಹೀಗಾಗಿ, ವಯಸ್ಸಿಗೆ ತಕ್ಕಂತೆ ಅಗತ್ಯ ನಿದ್ದೆ ಪಡೆಯುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರಿಗೂ ಮುಖ್ಯವಾಗಿದೆ.