
ಇತ್ತೀಚಿನ ದಿನಗಳಲ್ಲಿ ಬಳಸುವ ಸಾಮಾನ್ಯ ಶಾಂಪೂಗಳಲ್ಲಿ ಸಲ್ಫೇಟ್, ಪ್ಯಾರಬೆನ್‌ಗಳು ಮತ್ತು ಕೃತಕ ಸುಗಂಧ ದ್ರವ್ಯಗಳು ಮಿಶ್ರಣವಾಗಿರುತ್ತವೆ. ಇವು ಕೂದಲು, ನೆತ್ತಿ ಹಾಗೂ ಚರ್ಮಕ್ಕೆ ದೀರ್ಘಾವಧಿಯ ಹಾನಿಯನ್ನುಂಟುಮಾಡಬಹುದು. ಇದೇ ಕಾರಣಕ್ಕೆ ಇಂದು ಹೆಚ್ಚಿನ ಜನರು ರಾಸಾಯನಿಕ ಮುಕ್ತ ಶಾಂಪೂವನ್ನು ಬಳಸಲು ಮುಂದಾಗುತ್ತಿದ್ದಾರೆ.
ನಿಮ್ಮ ಕೂದಲು ಮತ್ತು ನೆತ್ತಿಯ ಆರೋಗ್ಯ ಕಾಪಾಡಲು ಮನೆಯಲ್ಲಿಯೇ, ಕಡಿಮೆ ಖರ್ಚಿನಲ್ಲಿ, ಸಂಪೂರ್ಣ ರಾಸಾಯನಿಕ ಮುಕ್ತವಾದ ಶಾಂಪೂವನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.
ನ್ಯಾಚುರಲ್ ಶ್ಯಾಂಪೂವಿನ ಪ್ರಯೋಜನಗಳು
- ಯಾವುದೇ ಹಾನಿಕಾರಕ ಪದಾರ್ಥಗಳು ಇಲ್ಲದಿರುವುದರಿಂದ ಚರ್ಮಕ್ಕಾಗಲೀ, ಕೂದಲಿಗಾಗಲೀ ಯಾವುದೇ ಹಾನಿಯಾಗುವುದಿಲ್ಲ.
- ತಲೆಯಲ್ಲಿ ತುರಿಕೆ, ತಲೆಹೊಟ್ಟು, ಶುಷ್ಕತೆ ಉಂಟಾಗುವುದಿಲ್ಲ.
- ಕಡಿಮೆ ಖರ್ಚು ಮತ್ತು ಹೆಚ್ಚಿನ ಪೋಷಕಾಂಶ ಲಭ್ಯ.
ಬೇಕಾಗುವ ಸಾಮಾಗ್ರಿಗಳು
ಶೀಕಾಕಾಯಿ ಹುಡಿ: 2 ಟೇಬಲ್ ಸ್ಪೂನ್
ಅಂಟುವಾಳ/ ನೊರೆಕಾಯಿ ಹುಡಿ: 2 ಟೇಬಲ್ ಸ್ಪೂನ್
ನೆಲ್ಲಿಕಾಯಿ ಹುಡಿ: 1 ಟೇಬಲ್ ಸ್ಪೂನ್
ಮೆಂತ್ಯ ಹುಡಿ: 1 ಟೇಬಲ್ ಸ್ಪೂನ್
ಎಸೆಂಶಿಯಲ್ ಆಯಿಲ್ಸ್ (ಐಚ್ಛಿಕ): 2-3 ಹನಿ (ಪರಿಮಳಕ್ಕಾಗಿ)
ನೀರು: 2 ಕಪ್
ತಯಾರಿಸುವ ಸುಲಭ ವಿಧಾನ
- ಒಂದು ಬಿಸಿಯಾದ ಬಾಣಲೆಗೆ 2 ಕಪ್ ನೀರನ್ನು ಹಾಕಿಕೊಳ್ಳಿ.
- ನಂತರ ನೀರಿಗೆ ಶೀಕಾಕಾಯಿ, ನೊರೆಕಾಯಿ, ನೆಲ್ಲಿಕಾಯಿ ಮತ್ತು ಮೆಂತ್ಯ ಹುಡಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಮಿಶ್ರಣವು ಸ್ವಲ್ಪ ದಪ್ಪವಾಗುವವರೆಗೆ 10 – 15 ನಿಮಿಷ ಕುದಿಸಿ.
- ಮಿಶ್ರಣವು ಸಂಪೂರ್ಣವಾಗಿ ತಣ್ಣಗಾದ ಬಳಿಕ ಅದನ್ನು ಸೋಸಿಕೊಳ್ಳಿ.
- ಸೋಸಿದ ದ್ರಾವಣಕ್ಕೆ ಪರಿಮಳಕ್ಕಾಗಿ ನಿಮಗಿಷ್ಟವಾದ ಎಸೆಂಶಿಯಲ್ ಆಯಿಲನ್ನು 2-3 ಹನಿಯನ್ನು ಸೇರಿಸಿ.
- ಈ ಶಾಂಪೂವನ್ನು ಗಾಜಿನ ಬಾಟಲ್‌ನಲ್ಲಿ ಶೇಖರಿಸಿಡಿ. ಇದು 5 ದಿನಗಳಿಗಿಂತಲೂ ಹೆಚ್ಚು ಕಾಲ ಬಾಳಿಕೆ ಬರಲು ರೆಫ್ರಿಜರೇಟರ್‌ನಲ್ಲಿ ಶೇಖರಿಸಿಟ್ಟರೆ ಉತ್ತಮ.
ಬಳಕೆಯ ವಿಧಾನ
ಕೂದಲನ್ನು ಒದ್ದೆ ಮಾಡಿ, ಕೂದಲು ಮತ್ತು ನೆತ್ತಿಗೆ ಈ ಶಾಂಪೂವನ್ನು ಹಾಕಿ. 2-3 ನಿಮಿಷ ಚೆನ್ನಾಗಿ ಮಸಾಜ್ ಮಾಡಿಕೊಂಡು ನಂತರ ಬೆಚ್ಚಗಿನ ನೀರಿನಲ್ಲಿ ತಲೆಯನ್ನು ತೊಳೆಯಿರಿ.
ನೆನಪಿಡಿ: ಸಾಮಾನ್ಯವಾಗಿ ಬಳಸುವ ಶಾಂಪೂವಿನಿಂದ ಈ ರಾಸಾಯನಿಕ ಮುಕ್ತ ಶಾಂಪೂವನ್ನು ಬಳಸಲು ಆರಂಭಿಸಿದರೆ, ಕೂದಲಿಗೆ ಹೊಸ ಶಾಂಪೂವಿನೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಹೊಂದಿಕೊಂಡ ಬಳಿಕ ಕೂದಲು ಆರೋಗ್ಯಕರವಾಗಿರುವುದನ್ನು ನೀವು ಖಂಡಿತ ಗಮನಿಸಬಹುದು.