
ಪೌಷ್ಟಿಕಾಂಶಗಳ ಆಗರವಾಗಿರುವ ಪಪ್ಪಾಯಿ ಹಣ್ಣು (Papaya) ಜೀವಸತ್ವಗಳು, ಖನಿಜಗಳು, ಪೊಟ್ಯಾಸಿಯಮ್, ಫೈಬರ್ ಮತ್ತು ಫೋಲೇಟ್‌ನಿಂದ ಸಮೃದ್ಧವಾಗಿದೆ. ಇದರಲ್ಲಿರುವ ಪ್ರಮುಖವಾದ ಪಪೈನ್ ಎಂಬ ಕಿಣ್ವವು ದೇಹದ ಅನೇಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ವಿಶೇಷವಾಗಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬೌಲ್ ಪಪ್ಪಾಯಿ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ವಿಟಮಿನ್ ಎ, ಸಿ ಮತ್ತು ಇ ಯಲ್ಲಿ ಸಮೃದ್ಧವಾಗಿರುವ ಪಪ್ಪಾಯಿಯು ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ಸೇವಿಸುವುದರ ಆರೋಗ್ಯ ಪ್ರಯೋಜನಗಳು
1. ಮಲಬದ್ಧತೆ ನಿವಾರಣೆಗೆ ರಾಮಬಾಣ
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ತಿನ್ನುವುದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಪಪ್ಪಾಯಿಯಲ್ಲಿರುವ ಹೇರಳವಾದ ಫೈಬರ್ ಅಂಶವು ಕರುಳಿನ ಚಲನೆಯನ್ನು ಸುಲಭಗೊಳಿಸಿ, ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ. ಇದು ಅಜೀರ್ಣ ಮತ್ತು ಆಮ್ಲೀಯತೆಯನ್ನೂ ಕಡಿಮೆ ಮಾಡುತ್ತದೆ.
2. ಕಾಂತಿಯುತ ಚರ್ಮಕ್ಕೆ ಸಹಕಾರಿ
ಪಪ್ಪಾಯಿಯಲ್ಲಿರುವ ಪೋಷಕಾಂಶಗಳು ಸತ್ತ ಚರ್ಮದ (Dead Skin) ಕೋಶಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ. ಇದು ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ, ಚರ್ಮವನ್ನು ತೇವಗೊಳಿಸುತ್ತದೆ ಮತ್ತು ಸುಕ್ಕುಗಳನ್ನು ತಡೆಯುವಲ್ಲಿಯೂ ಸಹಾಯಕವಾಗಿದೆ.
3. ಮಧುಮೇಹಿಗಳಿಗೆ ಪ್ರಯೋಜನಕಾರಿ
ಆರೋಗ್ಯ ತಜ್ಞರ ಪ್ರಕಾರ, ಪಪ್ಪಾಯಿಯಲ್ಲಿ ನಾರಿನಂಶ ಹೆಚ್ಚಿದ್ದು, ಸಕ್ಕರೆ ಅಂಶ ಕಡಿಮೆ ಇದೆ. ಹೀಗಾಗಿ ಮಧುಮೇಹ (Diabetes) ರೋಗಿಗಳಿಗೆ ಇದು ಅತ್ಯುತ್ತಮ ಹಣ್ಣು. ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಸ್ಥಿರವಾಗಿಡಲು ಸಹಾಯವಾಗುತ್ತದೆ.
4. ಹೃದಯದ ಆರೋಗ್ಯಕ್ಕೆ ಬೆಂಬಲ
ಪಪ್ಪಾಯಿಯಲ್ಲಿರುವ ಪೊಟ್ಯಾಸಿಯಮ್, ಫೈಬರ್ ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳು ಹೃದಯದ ಆರೋಗ್ಯಕ್ಕೆ ಉತ್ತಮ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಇದು ಹೃದಯದಲ್ಲಿ ರಕ್ತದ ಹರಿವನ್ನು ಸುಧಾರಿಸುವ ಮೂಲಕ ಹೃದಯದ ಅಪಧಮನಿಗಳು ಮುಚ್ಚಿಹೋಗುವುದನ್ನು ತಡೆಯುತ್ತದೆ.
5. ಮುಟ್ಟಿನ ಸೆಳೆತಕ್ಕೆ ಪರಿಹಾರ
ಮುಟ್ಟಿನ (Menstruation) ಸಮಯದಲ್ಲಿ ಹೆಣ್ಣುಮಕ್ಕಳಿಗೆ ಕಾಣಿಸಿಕೊಳ್ಳುವ ಸೆಳೆತ ಮತ್ತು ನೋವನ್ನು ನಿವಾರಿಸುವಲ್ಲಿ ಪಪ್ಪಾಯಿ ಹಣ್ಣು ಪ್ರಯೋಜನಕಾರಿಯಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಜೊತೆಗೆ, ಪಪ್ಪಾಯಿಯಲ್ಲಿರುವ ಕ್ಯಾರೋಟಿನ್ ಅಂಶವು ಈಸ್ಟ್ರೊಜೆನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸಿ ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
6. ತೂಕ ಇಳಿಕೆಗೆ ಸಹಕಾರಿ
ನಿಯಮಿತವಾಗಿ ಪಪ್ಪಾಯಿ ಸೇವನೆಯು ತೂಕ ಇಳಿಸಲು (Weight Loss) ಸಹಕಾರಿಯಾಗಿದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ ಮತ್ತು ಹೆಚ್ಚುವರಿ ಕೊಬ್ಬು ಕಡಿಮೆಯಾಗುತ್ತದೆ. ಬೆಳಗಿನ ಉಪಾಹಾರದಲ್ಲಿ ಪಪ್ಪಾಯಿಯ ಚೂರುಗಳಿಗೆ ಕಪ್ಪು ಉಪ್ಪು ಮತ್ತು ಕರಿಮೆಣಸು ಸೇರಿಸಿ ಸೇವಿಸುವುದು ಉತ್ತಮ.