
ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆಗೆ ಪವಿತ್ರ ಸ್ಥಾನವಿದೆ. ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಅಲ್ಲದೆ, ಉತ್ತಮ ಆರೋಗ್ಯದ ದೃಷ್ಟಿಯಿಂದಲೂ ವೀಳ್ಯದೆಲೆ ಸೇವನೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಅಭಿಪ್ರಾಯಪಡುತ್ತಾರೆ.
ದಿನಕ್ಕೊಂದು ಸೇಬು ವೈದ್ಯರಿಂದ ದೂರವಿರಿಸುತ್ತದೆ ಎಂಬ ಮಾತಿನಂತೆ, ನಿಯಮಿತವಾಗಿ ವೀಳ್ಯದೆಲೆ ಸೇವಿಸುವುದರಿಂದ 90 ವರ್ಷಗಳ ಕಾಲ ಆರೋಗ್ಯಯುತ ಜೀವನ ನಡೆಸಬಹುದು. ವೀಳ್ಯದೆಲೆಯಲ್ಲಿರುವ ನೈಸರ್ಗಿಕ ಔಷಧೀಯ ಗುಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ಅಜೀರ್ಣ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯಂತಹ ದೀರ್ಘಕಾಲದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತವೆ. ಊಟದ ನಂತರ ತಾಂಬೂಲ ಸೇವಿಸುವ ಅಭ್ಯಾಸವು ಲಾಲಾರಸದ ಸ್ರವಿಸುವಿಕೆಯನ್ನು ಹೆಚ್ಚಿಸಿ, ಜೀರ್ಣ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ.
ಜೀರ್ಣಾಂಗ ವ್ಯವಸ್ಥೆಯ ಜೊತೆಗೆ, ವೀಳ್ಯದೆಲೆಯು ಶ್ವಾಸಕೋಶದ ಆರೋಗ್ಯಕ್ಕೂ ಉತ್ತಮ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಕಫವನ್ನು ಕರಗಿಸಿ ಶೀತ, ಕೆಮ್ಮು ಮತ್ತು ಆಸ್ತಮಾ ರೋಗಿಗಳಿಗೆ ನೆರವಾಗುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ವೀಳ್ಯದೆಲೆಯಲ್ಲಿರುವ ‘ಫೈಟೊ ನ್ಯೂಟ್ರಿಯೆಂಟ್‌ಗಳು’ ಮತ್ತು ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ತಡೆಯುವ ಶಕ್ತಿಯನ್ನು ಹೊಂದಿವೆ. ಮಾನಸಿಕವಾಗಿ ಬಳಲುತ್ತಿರುವವರು ಅಥವಾ ಖಿನ್ನತೆಯ ಲಕ್ಷಣವಿರುವವರು ವೀಳ್ಯದೆಲೆ ಜಗಿಯುವುದರಿಂದ ಮೆದುಳಿನ ‘ಅಸೆಟೈಲ್‌ಕೋಲಿನ್’ ಸಮತೋಲನಗೊಂಡು ಮನಸ್ಸಿಗೆ ಶಾಂತಿ ಮತ್ತು ತಾಜಾತನ ದೊರೆಯುತ್ತದೆ.
ಬಾಯಿಯ ದುರ್ವಾಸನೆ ಮತ್ತು ಒಸಡುಗಳ ಊತವನ್ನು ಕಡಿಮೆ ಮಾಡುವಲ್ಲಿ ಇದು ನೈಸರ್ಗಿಕ ಸೋಂಕುನಿವಾರಕವಾಗಿ ಕೆಲಸ ಮಾಡುತ್ತದೆ. ಆದರೆ, ವೀಳ್ಯದೆಲೆ ಸೇವಿಸುವಾಗ ತಂಬಾಕು ಅಥವಾ ಅತಿಯಾದ ಸುಣ್ಣ ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು. ಕೇವಲ ಶುದ್ಧ ಹಸಿರು ಎಲೆಗಳನ್ನು ಜಗಿಯುವುದು ಅಥವಾ ಎಲೆಗಳ ಕಷಾಯ ಸೇವಿಸುವುದು ಅತ್ಯಂತ ಹಿತಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.



































