
ದೇಹದ ಉಲ್ಲಾಸಕ್ಕೆ ಎಳನೀರು ಕುಡಿಯುವುದು ಸಾಮಾನ್ಯ. ಆದರೆ, ಎಳನೀರು ಕೇವಲ ದ್ರವ ಸಮತೋಲನವನ್ನು ಕಾಪಾಡಲು ಮಾತ್ರವಲ್ಲದೆ, ಆರೋಗ್ಯಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಹೊಂದಿರುವ ಪಾನೀಯವಾಗಿದೆ. ಹೃದಯ ಮತ್ತು ಮೂತ್ರಪಿಂಡದ ಆರೋಗ್ಯದಿಂದ ಹಿಡಿದು ಜೀರ್ಣಕ್ರಿಯೆ ಮತ್ತು ಚರ್ಮದ ಸೌಂದರ್ಯದವರೆಗೂ ಇದರ ಸೇವನೆಯಿಂದ ಹಲವು ಪ್ರಯೋಜನಗಳಿವೆ.
ಹೃದಯ ಮತ್ತು ಮೂತ್ರಪಿಂಡಕ್ಕೆ ಸಹಕಾರಿ
ಎಳನೀರಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಇದಲ್ಲದೆ, ಇದು ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಮೂತ್ರದ ಉತ್ಪಾದನೆಯನ್ನು ಹೆಚ್ಚಿಸಿ ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳದಂತೆ ತಡೆಯಲು ಸಹಾಯಕವಾಗಿದೆ.

ಜೀರ್ಣಕ್ರಿಯೆಗೆ ಮತ್ತು ತೂಕ ಇಳಿಕೆಗೆ ಸಹಾಯ
ಎಳನೀರಿನಲ್ಲಿ ಕ್ಯಾಟಲೇಸ್, ಪೆರಾಕ್ಸಿಡೇಸ್ ಮತ್ತು ಡಿಹೈಡ್ರೋಜಿನೇಸ್‌ನಂತಹ ಜೈವಿಕ ಸಕ್ರಿಯ ಕಿಣ್ವಗಳಿವೆ. ಈ ಕಿಣ್ವಗಳು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತವೆ. ಅಜೀರ್ಣ, ಮಲಬದ್ಧತೆ ಅಥವಾ ಹೊಟ್ಟೆ ಉಬ್ಬರದಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪರಿಹಾರ ನೀಡುತ್ತದೆ. ಜೊತೆಗೆ, ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬು ರಹಿತವಾಗಿರುವುದರಿಂದ ತೂಕ ಇಳಿಸುವವರಿಗೆ ಉತ್ತಮ ಪಾನೀಯವಾಗಿದೆ.
ಎಚ್ಚರಿಕೆಗಳು ಮತ್ತು ಮುಂಜಾಗ್ರತೆಗಳು
ಎಳನೀರು ಸಾಮಾನ್ಯವಾಗಿ ಆರೋಗ್ಯಕರವಾಗಿದ್ದರೂ, ಕೆಲವು ಆರೋಗ್ಯ ಸಮಸ್ಯೆ ಇರುವವರು ಇದರ ಸೇವನೆ ಬಗ್ಗೆ ಎಚ್ಚರಿಕೆ ವಹಿಸಬೇಕು.
- ಮಧುಮೇಹ ಇರುವವರಿಗೆ: ಎಳನೀರಿನಲ್ಲಿ ನೈಸರ್ಗಿಕ ಸಕ್ಕರೆ ಇರುತ್ತದೆ. ಇದು ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧ ಹೊಂದಿರುವ ಜನರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು.
- ಮೂತ್ರಪಿಂಡ ಅಥವಾ ಮೂತ್ರಕೋಶದ ಸಮಸ್ಯೆ ಇದ್ದರೆ: ಎಳನೀರಿನಲ್ಲಿ ಪೊಟ್ಯಾಸಿಯಮ್ ಹೆಚ್ಚಿರುವುದರಿಂದ ಈಗಾಗಲೇ ಮೂತ್ರಕೋಶದ ಸಮಸ್ಯೆ ಇರುವವರಲ್ಲಿ ರಕ್ತದ ಹರಿವನ್ನು ಹೆಚ್ಚಿಸಿ ಹಾನಿ ಉಂಟುಮಾಡಬಹುದು.
- ಇತರೆ: ತೆಂಗಿನ ಉತ್ಪನ್ನಗಳಿಗೆ ಅಲರ್ಜಿ ಇರುವವರು ಎಚ್ಚರಿಕೆ ವಹಿಸಬೇಕು. ಹಾಗೆಯೇ, ನೆಗಡಿ, ಕೆಮ್ಮು, ಅಥವಾ ಫ್ಲೂ ಇರುವಾಗ ಎಳನೀರು ಸೇವಿಸದಿರುವುದು ಉತ್ತಮ.
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಳನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.