
ಸಾಮಾನ್ಯವಾಗಿ ರಕ್ತದೊತ್ತಡ ಹೆಚ್ಚಾಗಲು ನಾವು ಉಪ್ಪು, ಮದ್ಯಪಾನ ಅಥವಾ ಮಾನಸಿಕ ಒತ್ತಡವನ್ನೇ ಹೊಣೆ ಮಾಡುತ್ತೇವೆ. ಆದರೆ ನ್ಯೂಜಿಲೆಂಡ್‌ನ ವಿಜ್ಞಾನಿಗಳು ನಡೆಸಿರುವ ಇತ್ತೀಚಿನ ಸಂಶೋಧನೆಯು ಮೆದುಳಿನ ಒಂದು ನಿರ್ದಿಷ್ಟ ಭಾಗವೇ ಈ ಸಮಸ್ಯೆಯ ‘ಮಾಸ್ಟರ್ ಮೈಂಡ್’ ಎಂಬ ಅಚ್ಚರಿಯ ಸತ್ಯವನ್ನು ಹೊರಹಾಕಿದೆ. ಮೆದುಳಿನ ಕಾಂಡದಲ್ಲಿರುವ (Brainstem) ‘ಲ್ಯಾಟರಲ್ ಪ್ಯಾರಾಫೇಶಿಯಲ್ ಪ್ರದೇಶ’ (Lateral Parafacial Region) ಎಂಬ ನರಗಳ ಸಮೂಹವು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಪ್ರೊಫೆಸರ್ ಜೂಲಿಯನ್ ಪ್ಯಾಟನ್ ಅವರ ಪ್ರಕಾರ, ನಾವು ನಗುವಾಗ, ಕೆಮ್ಮುವಾಗ ಅಥವಾ ವ್ಯಾಯಾಮ ಮಾಡುವಾಗ ಈ ‘ಲ್ಯಾಟರಲ್ ಪ್ಯಾರಾಫೇಶಿಯಲ್’ ಭಾಗವು ಸಕ್ರಿಯಗೊಳ್ಳುತ್ತದೆ. ಈ ಕ್ರಿಯೆಗಳು ನಡೆದಾಗ ಮೆದುಳು ರಕ್ತನಾಳಗಳನ್ನು ಸಂಕುಚಿತಗೊಳಿಸಲು (Tighten) ಸಂಕೇತಗಳನ್ನು ಕಳುಹಿಸುತ್ತದೆ. ರಕ್ತನಾಳಗಳು ಕಿರಿದಾದಾಗ ರಕ್ತದ ಹರಿವಿನ ಒತ್ತಡ ಹೆಚ್ಚಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಇದು ಸಾಮಾನ್ಯ ಪ್ರಕ್ರಿಯೆಯಾದರೂ, ಅಧಿಕ ರಕ್ತದೊತ್ತಡ ಇರುವವರಲ್ಲಿ ಈ ಮೆದುಳಿನ ಭಾಗವು ಅತಿಯಾಗಿ ಸಕ್ರಿಯವಾಗಿರುತ್ತದೆ. ಇದರಿಂದಾಗಿ ರಕ್ತದೊತ್ತಡವು ಸದಾ ಕಾಲ ಏರಿಕೆಯ ಮಟ್ಟದಲ್ಲಿಯೇ ಇರುತ್ತದೆ.
ಇಲ್ಲಿಯವರೆಗೆ ಕೇವಲ ಜೀವನಶೈಲಿಯನ್ನು ದೂಷಿಸುತ್ತಿದ್ದ ವೈದ್ಯಕೀಯ ಲೋಕಕ್ಕೆ ಈ ವರದಿಯು ಹೊಸ ಆಯಾಮ ನೀಡಿದೆ. ಮೆದುಳಿನ ನರಗಳ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ಅಧಿಕ ರಕ್ತದೊತ್ತಡಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬ ಆಶಾವಾದ ಮೂಡಿದೆ. ವಿಶೇಷವಾಗಿ, ಕುತ್ತಿಗೆಯ ಭಾಗದಲ್ಲಿರುವ ‘ಕ್ಯಾರೋಟಿಡ್ ಬಾಡೀಸ್’ (Carotid Bodies) ಎಂಬ ಕೋಶಗಳು ಈ ಮೆದುಳಿನ ಭಾಗವನ್ನು ಪ್ರೇರೇಪಿಸುತ್ತವೆ ಎಂದು ಪತ್ತೆಹಚ್ಚಲಾಗಿದ್ದು, ಇವುಗಳನ್ನು ಗುರಿಯಾಗಿಸಿಕೊಂಡು ಹೊಸ ಔಷಧಿಗಳನ್ನು ತಯಾರಿಸಲು ಸಂಶೋಧಕರು ಮುಂದಾಗಿದ್ದಾರೆ.



































