
ನವದೆಹಲಿ: ದೇಶದ ಸಾಮಾನ್ಯ ಜನರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಬ್ಯಾಂಕಿಂಗ್ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆಯನ್ನು ನೀಡಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಅಡಿಯಲ್ಲಿ ತೆರೆಯಲಾದ ಉಳಿತಾಯ ಖಾತೆಗಳಲ್ಲಿ ಕನಿಷ್ಠ ನಗದು ಮೊತ್ತವನ್ನು ಕಾಯ್ದುಕೊಳ್ಳದಿದ್ದರೂ ಸಹ ಬ್ಯಾಂಕುಗಳು ಯಾವುದೇ ರೀತಿಯ ದಂಡ ಅಥವಾ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ ಸಚಿವರು, ಬ್ಯಾಂಕಿಂಗ್ ಸೇವೆಯಿಂದ ವಂಚಿತರಾದವರಿಗೆ ಮತ್ತು ಸಣ್ಣ ಉಳಿತಾಯಗಾರರಿಗೆ ಆರ್ಥಿಕ ಭದ್ರತೆ ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು. ಸದ್ಯ ದೇಶಾದ್ಯಂತ ಸುಮಾರು 72 ಕೋಟಿಗೂ ಅಧಿಕ ಬಿಎಸ್‍ಬಿಡಿ (BSBD) ಹಾಗೂ ಜನ್ ಧನ್ ಖಾತೆಗಳಿದ್ದು, ಈ ಎಲ್ಲಾ ಖಾತೆದಾರರಿಗೆ ‘ಶೂನ್ಯ ಬ್ಯಾಲೆನ್ಸ್’ ಸೌಲಭ್ಯ ಮುಂದುವರಿಯಲಿದೆ.
ಉಚಿತ ಸೇವೆಗಳ ಲಭ್ಯತೆ: ಈ ವಿಶೇಷ ಯೋಜನೆಯಡಿ ಖಾತೆ ಹೊಂದಿರುವವರು ಹಣವನ್ನು ಜಮಾ ಮಾಡಲು, ಹಿಂಪಡೆಯಲು ಹಾಗೂ ಎಟಿಎಂ ಸೇವೆಗಳನ್ನು ಬಳಸಲು ಯಾವುದೇ ಕನಿಷ್ಠ ಮೊತ್ತದ ಮಿತಿ ಇರುವುದಿಲ್ಲ. ಬ್ಯಾಂಕುಗಳು ಇಂತಹ ಗ್ರಾಹಕರಿಗೆ ಮೂಲಭೂತ ಸೇವೆಗಳನ್ನು ಸಂಪೂರ್ಣ ಉಚಿತವಾಗಿ ನೀಡಬೇಕೆಂದು ಸಚಿವರು ಪುನರುಚ್ಚರಿಸಿದ್ದಾರೆ. ಈ ಕ್ರಮವು ಗ್ರಾಮೀಣ ಭಾಗದ ಜನರನ್ನು ಮತ್ತು ಆರ್ಥಿಕವಾಗಿ ಅಶಕ್ತರನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮುಖ್ಯವಾಹಿನಿಗೆ ತರಲು ಸಹಕಾರಿಯಾಗಲಿದೆ.



































