
ಕೊಪ್ಪ : ಕೊಪ್ಪ ಸಮೀಪದ ಸೂರಾಲು ಮೇಳದ ಯಕ್ಷಗಾನ ಕಾರ್ಯಕ್ರಮ ಮಳೆ ಕಾರಣದಿಂದ ರದ್ದಾದ ಬಳಿಕ, ಊರಿಗೆ ಹಿಂದಿರುಗುತ್ತಿದ್ದ ಯುವ ಕಲಾವಿದರೊಬ್ಬರು ವಿದ್ಯುತ್ ತಂತಿ ಬಿದ್ದು ಮೃತಪಟ್ಟಿರುವ ಘಟನೆ ಆಗುಂಬೆ ಘಾಟ್ ಬಳಿ ನಡೆದಿದೆ.
ಮೇಳದ ಯಕ್ಷಗಾನ ಕಲಾವಿದರಾದ ರಂಜಿತ್ ಬನ್ನಾಡಿ ಹಾಗೂ ಶ್ರೀವೇಷಧಾರಿ ವಿನೋದ್ ರಾಜ್ ಅವರು ಬುಧವಾರ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಆಗುಂಬೆ ಘಾಟ್ ಮಾರ್ಗವಾಗಿ ಹಿಂದಿರುಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ಕಡಿದು ಬಿದ್ದ ವಿದ್ಯುತ್ ತಂತಿ ಅವರ ಮೇಲೆ ಬಿದ್ದಿದ್ದು, ಮುಂದೆ ಸವಾರರಾಗಿದ್ದ ರಂಜಿತ್ ಬನ್ನಾಡಿಗೆ ತೀವ್ರ ಗಾಯವಾಗಿರುತ್ತದೆ.
ಸ್ಥಳೀಯರು ತಕ್ಷಣವೇ ಸ್ಪಂದಿಸಿ, ಗಾಯಗೊಂಡ ರಂಜಿತ್ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ತುರ್ತುವಾಹನದಲ್ಲಿ ಕರೆದೊಯ್ಯುವಾಗಲೇ ಅವರು ತೀವ್ರ ನರಳಾಟಕ್ಕೆ ಒಳಗಾಗಿ, ಆಸ್ಪತ್ರೆ ತಲುಪುವ ಮೊದಲೇ ಹೃದಯ ಬಡಿತ ನಿಂತು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಅವರ ಜೊತೆಗೆ ಪ್ರಯಾಣಿಸುತ್ತಿದ್ದ ವಿನೋದ್ ರಾಜ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ತಕ್ಷಣದ ಚಿಕಿತ್ಸೆಯಿಂದ ಅವರು ಅಪಾಯದಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.
ಯಕ್ಷಗಾನ ಲೋಕದಲ್ಲಿ ತನ್ನದೇ ಆದ ಗುರುತು ಮೂಡಿಸುತ್ತಿದ್ದ ಯುವ ಪ್ರತಿಭೆ ರಂಜಿತ್ ಬನ್ನಾಡಿಯ ಅಕಾಲಿಕ ಅಗಲಿಕೆಗೆ ಕ್ಷೇತ್ರದ ಕಲಾಪ್ರಿಯರಲ್ಲಿ ಆಘಾತ ವಾತಾವರಣ ನಿರ್ಮಾಣವಾಗಿದೆ.
ಭಗವಂತ ರಂಜಿತ್ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಈ ದುಃಖವನ್ನು ಎದುರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.